ಮೃತಪಟ್ಟ ರೈತರ ದಾಖಲೆ ಇಲ್ಲ ಎಂದ ಕೇಂದ್ರ ಸರಕಾರಕ್ಕೆ ರಾಹುಲ್ ತರಾಟೆ
ಹೊಸದಿಲ್ಲಿ, ಡಿ. 3: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಸಂದರ್ಭ ಸಾವನ್ನಪ್ಪಿದ ರೈತರ ದಾಖಲೆ ಇಲ್ಲ ಎಂದು ಹೇಳಿರುವ ಕೇಂದ್ರ ಸರಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಸಂವೇದನಾಶೀಲ ರಹಿತ ಹಾಗೂ ಅಹಂಕಾರದ ಹೇಳಿಕೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭ ರೈತರು ಸಾವನ್ನಪ್ಪಿರುವುದಕ್ಕೆ ಪಂಜಾಬ್ ಸರಕಾರ ಹೊಣೆಯಲ್ಲ. ಆದರೆ, ಅದು ರಾಜ್ಯದ ಮೃತಪಟ್ಟ 403 ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದೆ ಎಂದು ಅವರು ಹೇಳಿದರು. ಪ್ರತಿಭಟನೆ ಸಂದರ್ಭ ಮೃತಪಟ್ಟ ಪಂಜಾಬ್ ಅಲ್ಲದೆ ಇತರ ರಾಜ್ಯಗಳ 100 ರೈತರ ಪಟ್ಟಿ ಕೂಡ ಕಾಂಗ್ರೆಸ್‌ನಲ್ಲಿ ಇದೆ. ಸಾರ್ವಜನಿಕ ದಾಖಲೆಯ ಆಧಾರದಲ್ಲಿ ಸಂಕಲಿಸಲಾದ ಮೃತಪಟ್ಟ 200 ರೈತರ ಇನ್ನೊಂದು ಪಟ್ಟಿ ಕೂಡ ಇದೆ. ಈ ಪಟ್ಟಿಯನ್ನು ಸೋಮವಾರ ಸಂಸತ್ತಿನ ಮುಂದಿರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ರೈತರ ಬಾಕಿ ಉಳಿದ ಬೇಡಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ‘‘ರೈತರ ಬೇಡಿಕೆಗಳನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳುತ್ತದೆ ಎಂದು ನಾನು ಭಾವಿಸಲಾರೆ’’ ಎಂದರು.