ದ್ವಿತೀಯ ಟೆಸ್ಟ್: ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ಎಜಾಝ್ ಪಟೇಲ್; 325 ರನ್ ಗೆ ಭಾರತ ಆಲೌಟ್
ಹುಟ್ಟೂರು ಮುಂಬೈನಲ್ಲಿ ಇತಿಹಾಸ ನಿರ್ಮಿಸಿದ ನ್ಯೂಝಿಲ್ಯಾಂಡ್ ಸ್ಪಿನ್ನರ್
Photo: Twitter/@ICC
ಮುಂಬೈ: ಮುಂಬೈ ಮೂಲದ ಸ್ಪಿನ್ ಬೌಲರ್ ಎಜಾಝ್ ಪಟೇಲ್ ಅವರ ಅಮೋಘ ಬೌಲಿಂಗ್ ಹೊರತಾಗಿಯೂ ಭಾರತವು ಕನ್ನಡಿಗ ಮಯಾಂಕ್ ಅಗರವಾಲ್ ಅವರ 150 ರನ್ ನೆರವಿನಿಂದ ನ್ಯೂಝಿಲ್ಯಾಂಡ್ ವಿರುದ್ದದ ದ್ವಿತೀಯ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 325 ರನ್ ಗಳಿಸಿ ಆಲೌಟಾಗಿದೆ.
ಇಜಾಝ್ ಪಟೇಲ್ ಭಾರತದ ಎಲ್ಲ ವಿಕೆಟ್ ಗಳನ್ನು ಕಬಳಿಸಿ 10 ವಿಕೆಟ್ ಗಳ ಗೊಂಚಲು ಪಡೆದರು.
ಜಿಮ್ ಲೇಕರ್ ಹಾಗೂ ಅನಿಲ್ ಕುಂಬ್ಳೆ ನಂತರ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್ವೊಂದರಲ್ಲಿ 10 ವಿಕೆಟ್ ಗೊಂಚಲನ್ನು ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾದ ಪಟೇಲ್ ತಮ್ಮ ಹುಟ್ಟೂರು ಮುಂಬೈನಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಇಂಗ್ಲೆಂಡ್ ನ ಜಿಮ್ ಲೇಕರ್ 1956ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ಆಸ್ಟ್ರೇಲಿಯ ವಿರುದ್ಧ 53 ರನ್ ಗೆ 10 ವಿಕೆಟ್ ಗಳನ್ನು ಪಡೆದಿದ್ದರು. ಅನಿಲ್ ಕುಂಬ್ಳೆ 1999ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 74 ರನ್ ನೀಡಿ 10 ವಿಕೆಟ್ ಗೊಂಚಲು ಕಬಳಿಸಿದ್ದರು.
ಎಡಗೈ ಸ್ಪಿನ್ನರ್ ತನ್ನ ಶಿಸ್ತಿನ ಬೌಲಿಂಗ್ ಮೂಲಕ ಮ್ಯಾಜಿಕ್ ಸಂಖ್ಯೆಗಳನ್ನು ತಲುಪಿದರು.
ಭಾರತ ಪರ ಮಯಾಂಕ್ ಅಗರ್ವಾಲ್ ಒತ್ತಡದಲ್ಲಿ 150 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಆಗಿದ್ದರೆ, ಅಕ್ಷರ್ ಪಟೇಲ್ ಕೂಡ ಚೊಚ್ಚಲ ಅರ್ಧಶತಕ ದಾಖಲಿಸಿದರು.
ಔಟಾಗದೆ 120 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಮಯಾಂಕ್ ಇಂದು 150 ರನ್ ಗಳಿಸಿ ಪಟೇಲ್ ಗೆ ವಿಕೆಟ್ ಒಪ್ಪಿಸಿದರು.
ಪಟೇಲ್ ಅವರು ಪ್ರವಾಸಿ ತಂಡದ ಬೌಲರ್ ಗಳ ಪೈಕಿ ಅತ್ಯುತ್ತಮ ಬೌಲಿಂಗ್(10-119) ಸಂಘಟಿಸಿದರು. ಈ ಹಿಂದೆ 2017ರಲ್ಲಿ ನಥಾನ್ ಲಿಯಾನ್ (8/50 ) ಹಾಗೂ 2008ರಲ್ಲಿ ಜೇಸನ್ ಕ್ರೆಝಾ (8/215) ಉತ್ತಮ ಬೌಲಿಂಗ್ ಮಾಡಿರುವ ಪ್ರವಾಸಿ ತಂಡದ ಬೌಲರ್ ಆಗಿದ್ದಾರೆ.