ಇನ್ನು ಮುಂದೆ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಎಸ್ಎಂಎಸ್ ಮೂಲಕ ಮಾಹಿತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.4: ಸಂಚಾರ ನಿಯಮ ಉಲ್ಲಂಘನೆಗಳ ಅಪರಾಧಗಳ ಕುರಿತು ವಾಹನ ಮಾಲಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುವ ವಿನೂತನ ವ್ಯವಸ್ಥೆಯನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ಜಾರಿಗೊಳಿಸಲು ಸಜ್ಜಾಗಿದ್ದಾರೆ.
ಶನಿವಾರ ಈ ಕುರಿತು ಮಾಹಿತಿ ನೀಡಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಸಾರಿಗೆ ಇಲಾಖೆ ವಾಹನಗಳ ನೋಂದಣಿ ಜತೆಗೆ ಸಂಬಂಧಿಸಿದ ವಾಹನಗಳ ಮಾಲಕರ ಮೊಬೈಲ್ಗಳನ್ನು ಸಂಗ್ರಹಿಸುತ್ತಿದೆ. ಈ ಮಾಹಿತಿಯನ್ನು ಸಾರಿಗೆ ಇಲಾಖೆ ಬೆಂಗಳೂರು ಪೊಲೀಸರ ಜೊತೆ ಹಂಚಿಕೊಳ್ಳುತ್ತದೆ.
ಇದಾದ ಬಳಿಕ ಯಾವುದೇ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಅದರ ಮಾಲಕರಿಗೆ ನೋಟಿಸ್ ಸಂಖ್ಯೆ, ವಾಹನಗಳ ನೋಂದಣಿ ಸಂಖ್ಯೆ, ಸಂಚಾರ ನಿಯಮ ಉಲ್ಲಂಘನೆ ಸ್ವರೂಪ, ದಿನಾಂಕ, ಸಮಯ ಮತ್ತು ದಂಡದ ಮೊತ್ತವನ್ನು ಒಳಗೊಂಡ ಎಸ್ಎಂಎಸ್ ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ತಕ್ಷಣವೇ ರವಾನಿಸಲಾಗುತ್ತದೆ ಎಂದರು.
ದಂಡ ಪಾವತಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ದಂಡ ಪಾವತಿಯ ಲಿಂಕ್ಗಳನ್ನು ಎಸ್ಎಂಎಸ್ ಒಳಗೊಂಡಿರುತ್ತದೆ. ಸಂದೇಶ ಕಳುಹಿಸಲು 20 ಪೈಸೆ ವೆಚ್ಚ ತಗುಲತ್ತದೆ ಎಂದು ಅವರು ತಿಳಿಸಿದರು.
ತಕ್ಷಣವೇ ಎಸ್ಎಂಎಸ್ ತಲುಪಿದರೆ ವಾಹನ ಮಾಲಕರು ಎಚ್ಚೆತ್ತುಕೊಂಡು ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲಿದ್ದಾರೆ. ಬೇರೆಯವರು ವಾಹನ ಚಲಾಯಿಸುತ್ತಿದ್ದಾಗ ಸಂಚಾರ ನಿಯಮ ಉಲ್ಲಂಘನೆಯಾಗಿದ್ದರೆ ಅದರ ಮಾಲಕರಿಗೆ ಸಂದೇಶ ಹೋಗಿ ತಪ್ಪುಗಳನ್ನು ಸರಿಪಡಿಸಲು ಅನುಕೂಲವಾಗಲಿದೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಇದರಿಂದ ಅಪಘಾತಗಳ ಪ್ರಮಾಣ ತಗ್ಗುವ ವಿಶ್ವಾಸವಿದೆ ಎಂದು ರವಿಕಾಂತೇಗೌಡ ನುಡಿದರು.








