ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಸಚಿವ ಮುರುಗೇಶ್ ನಿರಾಣಿ

ಕಲಬುರಗಿ, ಡಿ. 4: ‘ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಬಸವರಾಜ ಬೊಮ್ಮಾಯಿ ಅವರೇ ನಮ್ಮ ನಾಯಕರು. 2023ರ ಚುನಾವಣೆಯನ್ನು ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ. ಆ ಸ್ಥಾನಕ್ಕೆ ಮುರುಗೇಶ್ ನಿರಾಣಿ ಅವರನ್ನು ನಿಯೋಜನೆ ಮಾಡಲಾಗುತ್ತದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. 30 ವರ್ಷಗಳಿಗೂ ಹೆಚ್ಚು ಕಾಲದಿಂದ ಬಸವರಾಜ ಬೊಮ್ಮಾಯಿ ಅವರು ರಾಜಕೀಯದಲ್ಲಿ ಪಳಗಿದ್ದಾರೆ. ಅವರ ತಂದೆಯೂ ಮುಖ್ಯಮಂತ್ರಿ ಆಗಿದ್ದರು. ಇಷ್ಟು ದೊಡ್ಡ ಹಿನ್ನೆಲೆ ಇರುವ ನಾಯಕ ಮುಖ್ಯಮಂತ್ರಿ ಆಗಿದ್ದು ನಮಗೂ ಖುಷಿಯ ಸಂಗತಿ ಎಂದು ವಿವರಣೆ ನೀಡಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನನಗೆ ಬೃಹತ್ ಕೈಗಾರಿಕಾ ಇಲಾಖೆ ಸಚಿವ ಸ್ಥಾನವನ್ನು ನೀಡಿದ್ದು, ನನ್ನ ಇಲಾಖೆಯಲ್ಲಿ ಸಮರ್ಥವಾಗಿ ಮುನ್ನಡೆಸುತ್ತಿದ್ದೇನೆ ಎಂದ ಅವರು, ಬಸವರಾಜ ಬೊಮ್ಮಾಯಿ ಹಾಗೂ ನಾನು ಒಂದೇ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದೇವೆ. ಬಹಳ ವರ್ಷಗಳಿಂದ ಅವರ ವ್ಯಕ್ತಿತ್ವದ ಪರಿಚಯವಿದೆ ನನಗೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ನಿರಾಣಿ ಸ್ಪಷ್ಟಣೆ ನೀಡಿದರು.





