ಬಿಜೆಪಿ, ಕಾಂಗ್ರೆಸ್ ಪಕ್ಷದವರು ಕುಟುಂಬ ರಾಜಕಾರಣದ ಬಗ್ಗೆ ಕಾನೂನು ಜಾರಿ ಮಾಡಲಿ: ಕುಮಾರಸ್ವಾಮಿ ತಿರುಗೇಟು

ಮೈಸೂರು,ಡಿ.4: ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. ಸಿದ್ದರಾಮಯ್ಯರ ಮಗ ಶಾಸಕರಾಗಿದ್ದಾರೆ. ಅವರ ಅವರ ಇನ್ನೊಬ್ಬ ಮಗ ಅಕಾಲಿಕ ಮರಣಕ್ಕೀಡಾದರು. ಅವರು ಕೂಡ ಸಕ್ರಿಯ ರಾಜಕಾರಣದಲ್ಲಿದ್ದರು. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಹಲವರು ಈ ರೀತಿ ಇದ್ದಾರೆ. ಬಿಜೆಪಿ, ಕಾಂಗ್ರೆಸ್ ಪಕ್ಷದವರು ಕುಟುಂಬ ರಾಜಕಾರಣದ ಬಗ್ಗೆ ಕಾನೂನು ಜಾರಿ ಮಾಡಲಿ, ತಮ್ಮ ಸಾಮರ್ಥ್ಯದಿಂದ ಸಂವಿಧಾನ ತಿದ್ದುಪಡಿ ಮಾಡಲಿ. ಕುಟುಂಬದ ಎಷ್ಟು ಜನ ರಾಜಕಾರಣಕ್ಕೆ ಬರಬೇಕು ಎಂಬ ನಿಯಮ ಮಾಡಲಿ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಅವರ ಪರ ಪ್ರಚಾರ ಮಾಡಲು ಶನಿವಾರ ಮೈಸೂರಿಗೆ ಆಗಮಿಸಿದ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ತಮ್ಮ ಬಾಯಿಗೆ ಏಕೆ ಶ್ರಮ ಕೊಡುತ್ತಿದ್ದಾರೆ. ಅವರ ಹೇಳಿಕೆಯನ್ನು ಬರೆದು ಒಂದು ಸ್ಲೇಟ್ ಅನ್ನು ಕುತ್ತಿಗೆಗೆ ಹಾಕಿಕೊಂಡು ಓಡಾಡಲಿ. 2018 ರಿಂದ ಇದೇ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾಗಲಿದೆ. ಇದರ ಪರಿಣಾಮವಾಗಿ 2023ರಲ್ಲಿ ಜೆಡಿಎಸ್‍ಗೆ ಲಾಭವಾಗಲಿದೆ. ಬಿಜೆಪಿ ಬೆಂಬಲಿಗರ ಮತ ಜೆಡಿಎಸ್‍ಗೆ ಬರಲಿದೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಇನ್ನು ಎರಡು ಮೂರು ದಿನಗಳಲ್ಲಿ ತಿಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ 25 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ 6 ಕ್ಷೇತ್ರಗಳಲ್ಲಷ್ಟೇ ಸ್ಪರ್ದೆಮಾಡಿದೆ. ನಾವು ಸ್ಪರ್ಧೆಮಾಡಿರುವ ಆರು ಕ್ಷೇತ್ರಗಳಲ್ಲಿ ಯಾರ ಬೆಂಬಲವನ್ನು ಕೇಳುವುದಿಲ್ಲ, ನಾವು ಸ್ಪರ್ಧೆ ಮಾಡದೆ ಇನ್ನುಳಿದ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಇನ್ನೆರಡು ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದರು.
ಮುಂದಿನ 2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ರಾಜ್ಯ ರಾಜಕಾರಣದಲ್ಲಿ ವೈಯುಕ್ತಿಕ ಟೀಕೆ ವಿಚಾರವಾಗಿ ಮಾತನಾಡಿ, ಮೈಸೂರು ಸೇರಿದಂತೆ ಇತರೆ ಕ್ಷೇತ್ರದಲ್ಲಿ ಎಲ್ಲರ ಹೇಳಿಕೆ ನೋಡಿದ್ದೇನೆ. ವೈಯುಕ್ತಿಕ ಟೀಕೆ ಅವರ ಸ್ಥಾನಕ್ಕೆ ಅಗೌರವ ತೋರುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಾನೂ ಹಿಂದೆ ಅಂತಹ ಹೇಳಿಕೆಗಳನ್ನು ಕೊಟ್ಟಿದ್ದೆ. ನನ್ನ ಅಭಿಮಾನಿಗಳೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ ಮೇಲೆ ನಾನು ತಿದ್ದಿಕೊಂಡಿದ್ದೇನೆ. ನನ್ನ ಆತ್ಮಕ್ಕೆ ಇದು ಸರಿ ಅಲ್ಲ ಎನಿಸಿದೆ. ಹೀಗಾಗಿ ಮುಂದೆ ಈ ರೀತಿ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ನನ್ನ ಗುರಿ ಇರುವುದು 2023ರ ಚುನಾವಣೆ. ಹಾಗಾಗಿ ವೈಯುಕ್ತಿಕ ಟೀಕೆ ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಗೆಲ್ಲುವ ವಿಶ್ವಾಸವಿದೆ. ಕಳೆದ ಎರಡು ಬಾರಿಯೂ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದು, ಈ ಬಾರಿಯೂ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ತಿಳಿಸಿದರು.







