ವಿಧಾನ ಪರಿಷತ್ ಚುನಾವಣೆ; ಉಡುಪಿ ಜಿಲ್ಲೆಯಲ್ಲಿ ಸರ್ವಸಿದ್ಧತೆ: ಡಿಸಿ ಕೂರ್ಮಾರಾವ್

ಉಡುಪಿ, ಡಿ.4: ಈ ತಿಂಗಳ 10ರಂದು ಬೆಳಗ್ಗೆ 8ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಿಗಳ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಎಲ್ಲ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಒಟ್ಟು 2505 ಮತದಾರರಿದ್ದು, 154 ಗ್ರಾಮ ಪಂಚಾಯತ್ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 158 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 130 ಸಾಮಾನ್ಯ, 26 ಸೂಕ್ಷ್ಮ ಹಾಗೂ ಎರಡು ಅತೀಸೂಕ್ಷ್ಮ ಮತೆಗಟ್ಟೆಗಳಿದ್ದು, ಅವುಗಳ ಸುರಕ್ಷತೆ ಹಾಗೂ ಸೂಕ್ಷ್ಮತೆ ಯನ್ನು ಆಧರಿಸಿ ಪೊಲೀಸ್ ಬಂದೋಬಸ್ತ್‌ಗೆ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಜಿಲ್ಲೆಯ ಏಳು ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಗಳಿದ್ದು, ಇದರಲ್ಲಿ ಬಹ್ಮಾವರ(ಎಸ್‌ಎಂಎಸ್ ಪದವಿ ಪೂರ್ವ ಕಾಲೇಜು) ಹೊರತು ಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ಆಯಾ ತಾಲೂಕು ಕಚೇರಿಗಳನ್ನೇ ಮಸ್ಟರಿಂಗ್ ಕೇಂದ್ರವಾಗಿ ಗುರುತಿಸಲಾಗಿದೆ. ಮತದಾನದ ದಿನ ಎಲ್ಲ ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
ಮೈಕ್ರೋ ಅಬ್ಸರ್ವರ್ ಸೇರಿದಂತೆ ಉಡುಪಿಯಲ್ಲಿ 19, ಕಾಪುವಿನಲ್ಲಿ 18, ಕಾರ್ಕಳದಲ್ಲಿ 31, ಹೆಬ್ರಿಯಲ್ಲಿ 10, ಬ್ರಹ್ಮಾವರದಲ್ಲಿ 31, ಕುಂದಾಪುರದಲ್ಲಿ 53, ಬೈಂದೂರಿನಲ್ಲಿ 17 ಹೀಗೆ ಒಟ್ಟು 179 ಮಂದಿಯನ್ನು ನೇಮಕ ಮಾಡಲಾಗಿದೆ. ಈ ಚುನಾವಣೆಗೆ ಪ್ರತ್ಯೇಕ ಕೋವಿಡ್ ಮಾರ್ಗಸೂಚಿ ಜಾರಿ ಯಲ್ಲಿದ್ದು, ಅದರ ಅನ್ವಯ ಚುನಾವಣೆ ನಡೆಸಲು ಕ್ರಮ ತೆಗೆದುಕೊಳ್ಳಲಾಗು ವುದು. ಇದಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಜಿಪಂ ಸಿಇಓ ಡಾ. ವೈ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.
ಕಾಪು ಪುರಸಭೆ ಚುನಾವಣೆ
ಕಾಪು ಪುರಸಭೆಗೆ ಸಾರ್ವತ್ರಿಕ ಚುನಾವಣೆಯು ಡಿ.27ರಂದು ನಡೆಯಲಿದ್ದು, ಡಿ.8ರಿಂದ 30ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿ ಇರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಡಿ.15 ನಾಮಪತ್ರ ಸಲ್ಲಿಸಲು ಕೊನೆಯ ದಿನ, ಡಿ.16 ನಾಮಪತ್ರಗಳ ಪರಿಶೀಲನೆ, ಡಿ.18 ಉಮೇದುವಾರಿಕೆಗಳನ್ನು ಹಿಂತೆಗೆದು ಕೊಳ್ಳಲು ಕೊನೆಯ ದಿನ. ಡಿ.30ರಂದು ಮತ ಎಣಿಕೆ ನಡೆಯಲಿದೆ. ಕಾಪು ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, 23 ಮತಗಟ್ಟೆಗಳಿವೆ. 8049 ಗಂಡು, 9024 ಹೆಣ್ಣು ಸೇರಿದಂತೆ ಒಟ್ಟು 17074 ಮತದಾರರಿದ್ದಾರೆ ಎಂದರು.
ಗ್ರಾಪಂ 5 ಸ್ಥಾನಗಳಿಗೆ ಉಪಚುನಾವಣೆ
ಉಡುಪಿ ಜಿಲ್ಲಾ ವ್ಯಾಪ್ತಿಯ ಶಿರಿಯಾರ, ತೋನ್ಸೆ, ನಾಲ್ಕೂರು, ಕೋಟ, ಕೋಟೆ ಗ್ರಾಪಂಗಳ ಸದಸ್ಯ ಸ್ಥಾನವು ತೆರವಾಗಿರುವು ದರಿಂದ ಐದು ಸದಸ್ಯ ಸ್ಥಾನ ಗಳಿಗೆ ಉಪಚುನಾವಣೆಯು ಡಿ.27ರಂದು ನಡೆಯಲಿದೆ.
ಈ ಗ್ರಾಪಂ ವ್ಯಾಪ್ತಿಯಲ್ಲಿ ಡಿ.13ರಿಂದ 30ರವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಡಿ.17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಡಿ.18 ನಾಮಪತ್ರಗಳ ಪರಿಶೀಲನೆ, ಡಿ.20 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ಡಿ.30ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ.







