ಎಂ.ಆರ್.ಪಿ.ಎಲ್ ನಿಂದ ಅಣಕು ಪ್ರದರ್ಶನ

ಮಂಗಳೂರು: ರಾಸಾಯನಿಕ ವಿಪತ್ತು ದುರಂತ ನಿರ್ವಹಣಾ ತಡೆಗಟ್ಟುವ ದಿನದ ಅಂಗವಾಗಿ ಬೆಂಕಿ ದುರಂತ ಸಂಭವಿಸಿದ ಸಂದರ್ಭದಲ್ಲಿ ಅದರ ನಿರ್ವಹಣೆಯ ಅಣಕು ಪ್ರದರ್ಶನವನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‍ನ ಹೈಡ್ರೋ ಕ್ರ್ಯಾಕರ್ 2ನೇ ಘಟಕದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.
ಸುಮಾರು 45 ನಿಮಿಷಗಳ ಕಾಲ ಮಾಕ್ ಡ್ರಿಲ್ ಅಗ್ನಿಶಾಮಕ ಮತ್ತು ತಂಪಾಗಿಸುವ ಕಾರ್ಯಾಚರಣೆ ನಡೆಯಿತು.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂ.ಆರ್.ಪಿ.ಎಲ್.)ನ ಅತ್ಯಾಧುನಿಕ ಉಪಕರಣ ಹಾಗೂ ಸಲಕರಣೆಗಳ ಉಪಯೋಗವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಅಣುಕು ಪ್ರದರ್ಶನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಸದಸ್ಯರು ಅಣುಕು ಪ್ರದರ್ಶನವನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ವಿಜಯ್ ಕುಮಾರ್ ಪೂಜಾರ್, ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಪ್ರಾಧಿಕಾರದ ಹಾಗೂ ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ ಸಿ ಮಿಶ್ರಿಕೋಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಭೂಪಾಲ್ ಅನಿಲ ದುರಂತದ ಸ್ಮರಣಾರ್ಥ ಈ ಅಣುಕು ಪ್ರದರ್ಶನವನ್ನು ಆಯೋಜಿಸಲಾಯಿತು.





