ಉಡುಪಿ: 45 ದಿನಗಳ ಬಳಿಕ ಕೋವಿಡ್ಗೆ ಮೊದಲ ಬಲಿ
![ಉಡುಪಿ: 45 ದಿನಗಳ ಬಳಿಕ ಕೋವಿಡ್ಗೆ ಮೊದಲ ಬಲಿ ಉಡುಪಿ: 45 ದಿನಗಳ ಬಳಿಕ ಕೋವಿಡ್ಗೆ ಮೊದಲ ಬಲಿ](https://www.varthabharati.in/sites/default/files/images/articles/2021/12/4/316394-1638631437.jpg)
ಉಡುಪಿ, ಡಿ.4: ಜಿಲ್ಲೆಯಲ್ಲಿ 45 ದಿನಗಳ ಬಳಿಕ ಕೋವಿಡ್ ವೈರಸ್ ಮೊದಲ ಬಲಿ ಪಡೆದಿದೆ. ಕಳೆದ ಅ.10ರ ಬಳಿಕ ಶುಕ್ರವಾರ ಕುಂದಾಪುರದ 65 ವರ್ಷ ಪ್ರಾಯದ ಪುರುಷರೊಬ್ಬರು ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಒಟ್ಟು ಸಂಖ್ಯೆ 477ಕ್ಕೇರಿದೆ.
ಜಿಲ್ಲೆಯಲ್ಲಿ ಇಂದು ಎಂಟು ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಇಂದು 13 ಮಂದಿ ಕೋವಿಡ್ನಿಂದ ಸಂಪೂರ್ಣವಾಗಿ ಚೇತರಿಸಿ ಕೊಂಡಿದ್ದರೆ, ಒಟ್ಟು 76 ಮಂದಿ ಇನ್ನೂ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಮೂವರು ಪುರುಷರು ಹಾಗೂ ಐವರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 7 ಮಂದಿ ಉಡುಪಿ ಹಾಗೂ ಒಬ್ಬರು ಕುಂದಾಪುರ ತಾಲೂಕಿನವರು. ಪಾಸಿಟಿವ್ ಬಂದ ಎಲ್ಲರನ್ನೂ ಅವರವರ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶುಕ್ರವಾರ ಸೋಂಕಿನಿಂದ 13 ಮಂದಿ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,378ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 5652 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,931ಕ್ಕೇರಿದೆ.
9010 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಶನಿವಾರ ಒಟ್ಟು 9010 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 1512 ಮಂದಿ ಮೊದಲ ಡೋಸ್ ಹಾಗೂ 7498 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 952 ಮಂದಿ ಮೊದಲ ಡೋಸ್ ಹಾಗೂ 5319 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 560 ಮಂದಿ ಮೊದಲ ಡೋಸ್ ಹಾಗೂ 2164 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ ಆರು ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 9 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.