ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿ: ಯುವ ವಕೀಲರಿಗೆ ನ್ಯಾ.ಎಂ.ಜಿ.ಉಮಾ ಕರೆ

ಉಡುಪಿ, ಡಿ.4: ಯುವ ವಕೀಲರು ಭ್ರಷ್ಟಾಚಾರ, ಶಿಫಾರಸ್ಸಿಗೆ ಮಣಿಯದೆ ನ್ಯಾಯ ಒದಗಿಸಲು ಪ್ರಾಮಾಣಿಕತೆಯಿಂದ ಶ್ರಮಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಶನಿವಾರ ಉಡುಪಿ ನ್ಯಾಯಾಲಯ ಗಳ ಸಂಕೀರ್ಣ ಆವರಣದಲ್ಲಿ ಆಯೋಜಿಸಲಾದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸಮಾಜದ ಅಂಕುಡೊಂಕು ತಿದ್ದುವಲ್ಲಿ ವಕೀಲರ ವೃತ್ತಿ ಮಹತ್ತರ ಪಾತ್ರ ವಹಿಸುತ್ತದೆ. ವಕೀಲರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆಯಿಂದ ದೊರಕಿದ ಸ್ವಾತಂತ್ರ್ಯವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಸಮಾಜದ ಎಲ್ಲಾ ಜನರ ಕಷ್ಟಕ್ಕೆ ನ್ಯಾಯವಾದಿಗಳು ಸ್ಪಂದಿಸುತ್ತಾರೆ. ಸಮಾಜದ ಕಟ್ಟ ಕಡೆಯ ಜನರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ವಕೀಲರು ಮಾಡಬೇಕಾಗಿದೆ ಎಂದರು.
ಜನಸಾಮಾನ್ಯನಿಗೆ ನ್ಯಾಯಾಂಗ ವ್ಯವಸ್ಥೆ ಕೊನೆಯ ಭರವಸೆ ಆಗಿ ಉಳಿದು ಕೊಂಡಿದೆ. ಜನಸಾಮಾನ್ಯ ವಿಶ್ವಾಸವನ್ನು ನಾವು ವಕೀಲರು ಯಾವತ್ತು ಕಳೆದುಕೊಳ್ಳಬಾರದು. ವಕೀಲ ವೃತ್ತಿಗೆ ಅದರದ್ದೆ ಆದ ಘನತ, ಗೌರವ ಇದೆ. ಆದರೆ ಕೆಲ ವಕೀಲರಲ್ಲಿ ವ್ಯಕ್ತಿತ್ವದ ಕೊರತೆ ಕಾಣುತ್ತದೆ. ನಾವು ಅನೇಕರನ್ನು ಸೃಷ್ಟಿ ಮಾಡುತ್ತೇವೆ. ಇಷ್ಟು ಮಾತ್ರ ಸಾಲದು. ವೃತ್ತಿ ಘಟನೆಯನ್ನು ಯುವ ವಕೀಲರು ಎತ್ತಿ ಹಿಡಿಯಬೇಕು. ಜನರು ಮತ್ತು ನ್ಯಾಯಾಂಗ ವ್ಯವಸ್ಥೆ ನಡುವೆ ಸೇತುವೆ ಆಗಿ ಕೆಲಸಾಡಬೇಕೆಂದು ಅವರು ಹೇಳಿದರು.
ಈ ಸಂದರ್ದಲ್ಲಿಕ್ರೀಡಾರ್ಸ್ಪೆಗಳ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಬೆಂಗಳೂರಿನ ಸಿಎಂಆರ್ ಯುನಿವರ್ಸಿಟಿ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್‌ನ ಡೀನ್ ಪ್ರೊ.ಡಾ.ಟಿ.ಆರ್.ಸುಬ್ರಹ್ಮಣ್ಯ, ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅರುಣಾ ಶ್ಯಾಮ್ ಎಂ. ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ವಹಿಸಿದ್ದರು. ಸಂಘದ ಅಧ್ಯಕ್ಷ ಬಿ.ನಾಗರಾಜ್ ಸ್ವಾಗತಿಸಿದರು. ಹಿರಿಯ ವಕೀಲ ಎಂ.ಶಾಂತ ರಾಮ್ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲ ರಾಜಶೇಖರ ಪಿ.ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.







