ನೋಟಿಸ್ ನೀಡದೆ ಉದ್ಯೋಗ ತೊರೆದರೆ ವೇತನ ಮೇಲೆ ಜಿಎಸ್‍ಟಿ ಪಾವತಿಸಬೇಕಾಗಬಹುದು !

ಹೊಸದಿಲ್ಲಿ: ನಿಗದಿತ ಅವಧಿಗೆ ಮುಂಚಿತವಾಗಿ ನೋಟಿಸ್ ನೀಡದೆ ಉದ್ಯೋಗ ತೊರೆಯುವ ಮಂದಿಯ ವೇತನದ ಮೇಲೆ ಜಿಎಸ್‍ಟಿ ವಿಧಿಸಬಹುದಾಗಿದೆ ಎಂದು ಅಡ್ವಾನ್ಸ್ ಅಥಾರಿಟಿ ಆಫ್ ಅಡ್ವಾನ್ಸ್ ತೀರ್ಪೊಂದರಲ್ಲಿ ತಿಳಿಸಲಾಗಿದೆ ಎಂದು business-standard.com ವರದಿ ಮಾಡಿದೆ.
ಕಂಪೆನಿಗಳಲ್ಲಿ ಉದ್ಯೋಗಗಳನ್ನು ತೊರೆಯುತ್ತಿರುವವರ ಸಂಖ್ಯೆ ಅಧಿಕವಾಗಿರುವ ಪ್ರಸಕ್ತ ಸಂದರ್ಭ ಈ ತೀರ್ಪು ಮಹತ್ವ ಪಡೆದಿದೆ. ಭಾರತ್ ಒಮಾನ್ ರಿಫೈನರೀಸ್ ಪ್ರಕರಣ ಸಂಬಂಧ ಈ ತೀರ್ಪು ಬಂದಿದೆ.
ಭಾರತ್ ಒಮಾನ್ ರಿಫೈನರೀಸ್ ಸಂಸ್ಥೆಯು ಸಾರ್ವಜನಿಕ ರಂಗದ ಭಾರತ್ ಪೆಟ್ರೋಲಿಯಂನ ಅಂಗಸಂಸ್ಥೆಯಾಗಿದೆ. ಈ ನಿರ್ದಿಷ್ಟ ತೀರ್ಪಿನ ಪ್ರಕಾರ, ಕಂಪೆನಿಗಳು ಉದ್ಯೋಗಿಗಳಿಗಾಗಿ ಪಾವತಿಸುವ ದೂರವಾಣಿ ಬಿಲ್‍ಗಳು, ಉದ್ಯೋಗಿಗಳ ಗುಂಪು ವಿಮೆ, ನೋಟಿಸ್ ಅವಧಿಯ ವೇತನದ ಮೇಲೆ ಜಿಎಸ್‍ಟಿ ವಿಧಿಸಬಹುದಾಗಿದೆ ಎಂದು ವರದಿಯಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭ ಉನ್ನತ ಕೌಶಲ್ಯದ ಉದ್ಯೋಗಿಗಳ ಕೊರತೆ ಎದುರಾಗಿರುವುದರಿಂದ ಇಂತಹ ಕೌಶಲ್ಯ ಹೊಂದಿರುವವರು ಉತ್ತಮ ವೇತನ ಮತ್ತು ಸವಲತ್ತುಗಳನ್ನು ಅರಸಿ ಉದ್ಯೋಗಗಳನ್ನು ಬದಲಾಯಿಸುವುದು ಸಾಮಾನ್ಯವಾಗಿರುವ ಸಂದರ್ಭ ಈ ತೀರ್ಪು ಮಹತ್ವ ಪಡೆದಿದೆ.