ಉತ್ತರ ಪ್ರದೇಶ: ಎರಡು ದಿನಗಳಿಂದ ಕಾಣೆಯಾಗಿದ್ದ ಬಾಲಕಿಯ ಮೃತದೇಹ ನೆರೆಮನೆಯಲ್ಲಿ ಟ್ರಂಕ್‌ನಲ್ಲಿ ಪತ್ತೆ

ಲಕ್ನೋ, ಡಿ.4: ಪಶ್ಚಿಮ ಉತ್ತರ ಪ್ರದೇಶದ ಹಾಪುರ್ ಪಟ್ಟಣದ ತನ್ನ ಮನೆಯಿಂದ ಗುರುವಾರ ಸಂಜೆ ನಾಪತ್ತೆಯಾಗಿದ್ದ ಆರರ ಹರೆಯದ ಬಾಲಕಿಯ ಶವವು ಶನಿವಾರ ಬೆಳಿಗ್ಗೆ ನೆರೆಮನೆಯಲ್ಲಿ ಟ್ರಂಕೊಂದರಲ್ಲಿ ಪತ್ತೆಯಾಗಿದೆ.
ಇದು ಅತ್ಯಾಚಾರ ಪ್ರಕರಣವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಹಾಪುರ್ ಎಸ್‌ಪಿ ಸರ್ವೇಶ ಕುಮಾರ ಮಿಶ್ರಾ ಅವರು,ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು,ವರದಿ ಬಂದ ಬಳಿಕವೇ ಅತ್ಯಾಚಾರ ನಡೆದಿದೆಯೇ ಎನ್ನುವುದು ದೃಢಪಡಬೇಕಿದೆ ಎಂದು ಉತ್ತರಿಸಿದರು.
‘ಬಾಲಕಿ ನಾಪತ್ತೆಯಾದ ಬಗ್ಗೆ ಶುಕ್ರವಾರ ದೂರು ದಾಖಲಾಗಿತ್ತು. ಇಂದು ಬೆಳಿಗ್ಗೆ ನೆರೆಮನೆಯಿಂದ ದುರ್ನಾತ ಬರುತ್ತಿದೆ ಎಂಬ ಮಾಹಿತಿ ನಮಗೆ ಲಭಿಸಿತ್ತು. ಪೊಲೀಸರ ತಂಡವು ಅಲ್ಲಿಗೆ ತೆರಳಿದಾಗ ಮನೆಗೆ ಬೀಗ ಹಾಕಲಾಗಿತ್ತು. ಬೀಗ ಮುರಿದು ಒಳಪ್ರವೇಶಿಸಿದಾಗ ಟ್ರಂಕೊಂದರಲ್ಲಿ ಕೆಲವು ಬಟ್ಟೆಗಳೊಂದಿಗೆ ಬಾಲಕಿಯ ಶವವು ಪತ್ತೆಯಾಗಿತ್ತು. ನಾವು ಎಲ್ಲ ಕೋನಗಳಿಂದಲೂ ತನಿಖೆಯನ್ನು ನಡೆಸುತ್ತಿದ್ದೇವೆ’ ಎಂದರು.
ಮೃತದೇಹ ಪತ್ತೆಯಾಗಿದ್ದ ಮನೆಯ ಮಾಲಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಆತನನ್ನು ಕರೆದೊಯ್ಯುತ್ತಿರುವಾಗ ಉದ್ರಿಕ್ತ ಗುಂಪೊಂದು ಆತನ ಮೇಲೆ ದಾಳಿ ನಡೆಸಿತ್ತು. ಗುಂಪು ಆತನನ್ನು ಕೊಲ್ಲುವ ಮೊದಲೇ ಆತನ ಸುತ್ತ ಭದ್ರತಾ ಕವಚವನ್ನು ರಚಿಸಿದ ಪೊಲೀಸರು ಆತನನ್ನು ಸುರಕ್ಷಿತವಾಗಿ ಕರೆದೊಯ್ದ ದೃಶ್ಯಗಳು ವೀಡಿಯೊಗಳಲ್ಲಿ ದಾಖಲಾಗಿವೆ.
ಗುರುವಾರ ಸಂಜೆ 5:30ರ ಸುಮಾರಿಗೆ ಮಗಳು ತನ್ನಿಂದ ಐದು ರೂ.ಪಡೆದುಕೊಂಡು ತಾನು ಏನನ್ನೋ ಖರೀದಿಸಬೇಕು ಎಂದು ಹೇಳಿ ಮನೆಯಿಂದ ಹೊರಬಿದ್ದವಳು ವಾಪಸ್ ಬಂದಿರಲಿಲ್ಲ. ರಾತ್ರಿಯಿಡೀ ಹುಡುಕಾಡಿದ ಬಳಿಕ ಶುಕ್ರವಾರ ಬೆಳಿಗ್ಗೆ ಪೊಲೀಸ್ ದೂರು ದಾಖಲಿಸಿದ್ದೆವು ಮತ್ತು ಇಡೀ ದಿನ ಹುಡುಕಾಟ ಮುಂದುವರಿಸಿದ್ದೆವು ಎಂದು ತಿಳಿಸಿದ ಬಾಲಕಿಯ ತಂದೆ,ಪ್ರದೇಶದಲ್ಲಿಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ನೆರೆಮನೆಯಾತ ಬೈಕ್‌ನಲ್ಲಿ ತನ್ನ ಮಗಳನ್ನು ಕರೆದೊಯ್ದಿದ್ದು ಮತ್ತು ನಂತರ ಆಕೆಯನ್ನು ತನ್ನ ಮನೆಯೊಳಗೆ ಒಯ್ದಿದ್ದು ಕಂಡು ಬಂದಿತ್ತು ಎಂದರು.