ಚಿಕ್ಕಮಗಳೂರು: ಅತಿವೃಷ್ಟಿಗೆ ಒಂದೇ ತಿಂಗಳಲ್ಲಿ 46,866 ಹೆ. ಪ್ರದೇಶದಲ್ಲಿ ಬೆಳೆ ಹಾನಿ
ಇದುವರೆಗೆ 17,947 ಹೆ. ಪ್ರದೇಶದ 6894 ರೈತರಿಗೆ 8.58 ಕೋ.ರೂ. ಪರಿಹಾರ

ಚಿಕ್ಕಮಗಳೂರು, ಡಿ.4: ಜಿಲ್ಲೆಯಲ್ಲಿ ನವೆಂಬರ್ ತಿಂಗಳ 29 ದಿನಗಳ ಅವಧಿಯಲ್ಲಿ ಸುರಿದ ಅಕಾಲಿಕ ಮಳೆಗೆ ಜಿಲ್ಲಾದ್ಯಂತ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ 46,866 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಜುಲೈ ತಿಂಗಳಿಂದ ಇಲ್ಲಿಯವರೆಗಿನ ಬೆಳೆ ಹಾನಿ ಸಮೀಕ್ಷಾ ವರದಿಯಂತೆ 17,949 ಹೆಕ್ಟೇರ್ ಪ್ರದೇಶದಲ್ಲಾಗಿರುವ ಬೆಳೆಹಾನಿಗೆ 6894 ಫಲಾನುಭವಿಗಳಿಗೆ 8.58 ಕೋಟಿ ರೂ. ಪರಿಹಾರವನ್ನು ಜಿಲ್ಲಾಡಳಿತ ನೀಡಿದೆ.
ಕಳೆದ ನ.1ರಿಂದ 29ದಿನಗಳಲ್ಲಿ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ಹಾನಿಯಾಗಿದ್ದರೇ, 81.34 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 19,145 ಹೆಕ್ಟೇರ್ ರಾಗಿ, 4.40 ಹೆಕ್ಟೇರ್ ಬಾಳೆ, 3239 ಹೆಕ್ಟೇರ್ ಅಡಿಕೆ, 17.35 ಹೆಕ್ಟೇರ್ ಶುಂಠಿ, 0.40 ಹೆಕ್ಟೇರ್ ತೆಂಗು, 4523 ಹೆಕ್ಟೇರ್ ಕಾಳುಮೆಣಸು, 100.40 ಹೆಕ್ಟೇರ್ ಈರುಳ್ಳಿ, 72.80 ಹೆಕ್ಟೇರ್ ಆಲೂಗಡ್ಡೆ, 98.30 ಹೆಕ್ಟೇರ್ ಟೊಮ್ಯಾಟೊ, 91 ಹೆಕ್ಟೇರ್ ಹಸಿರುಮೆಣಸಿನಕಾಯಿ, 360 ಹೆಕ್ಟೇರ್ ಜೋಳ, 14 ಹೆಕ್ಟೇರ್ ಹತ್ತಿ ಹಾಗೂ 107 ಹೆಕ್ಟೇರ್ ಪ್ರದೇಶದಲ್ಲಿ ಇತರ ತರಕಾರಿ ಬೆಳೆಗಳು ನಾಶವಾಗಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ 12ಸಾವಿರ ಹೆಕ್ಟೇರ್ ಕಾಫಿ, ಮೂಡಿಗೆರೆ 6200, ಕೊಪ್ಪ 750, ನ.ರಾ.ಪುರ 50 ಹೆಕ್ಟೇರ್‍ನಲ್ಲಿ ನಷ್ಟವಾಗಿದ್ದರೆ, ಮೂಡಿಗೆರೆ ತಾಲೂಕಿನಲ್ಲಿ ಭತ್ತ 51 ಹೆಕ್ಟೇರ್, ಕೊಪ್ಪ 10, ನ.ರಾ.ಪುರ 20.34 ಹೆಕ್ಟೇರ್‍ನಲ್ಲಿ ನಾಶವಾಗಿದೆ. ರಾಗಿ ಬೆಳೆ ಚಿಕ್ಕಮಗಳೂರು ತಾಲೂಕಿನಲ್ಲಿ 1715 ಹೆಕ್ಟೇರ್, ಕಡೂರು 15,120, ತರೀಕೆರೆ 2310 ಹೆಕ್ಟೇರ್‍ಪ್ರದೇಶದಲ್ಲಿ ಬೆಳೆ ನಾಶವಾಗಿದೆ.
ಕಡೂರು ತಾಲೂಕಿನಲ್ಲಿ ಬಾಳೆ 4 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದ್ದರೇ ಮೂಡಿಗೆರೆ ತಾಲೂಕಿನಲ್ಲಿ ಅಡಿಕೆ ಬೆಳೆ 625 ಹೆಕ್ಟೇರ್ ಪ್ರದೇಶ, ಕೊಪ್ಪ 1805, ಶೃಂಗೇರಿ 477, ನ.ರಾ.ಪುರ 331, ತರೀಕೆರೆ 1.42 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. ಕಡೂರು ತಾಲೂಕಿನಲ್ಲಿ ಶುಂಠಿ ಬೆಳೆ 10 ಹೆಕ್ಟೇರ್‍ನಲ್ಲಿ ನಾಶವಾಗಿದ್ದರೇ, ತರೀಕೆರೆ 7.35 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಕಾಳುಮೆಣಸು ಬೆಳೆ 4284 ಹೆ. ಪ್ರದೇಶದಲ್ಲಿ ನಾಶವಾಗಿದ್ದರೇ, ಮೂಡಿಗೆರೆ ತಾಲೂಕಿನಲ್ಲಿ 174 ಹೆ., ಕೊಪ್ಪ 64, ತರೀಕೆರೆ 1.60 ಹೆಕ್ಟೇರ್‍ನಲ್ಲಿ ನಾಶವಾಗಿದೆ. ಈರುಳ್ಳಿ ಕಡೂರು ತಾಲೂಕಿನಲ್ಲಿ 15, ತರೀಕೆರೆ 85 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. ಆಲೂಗಡ್ಡೆ ಕಡೂರು ತಾಲೂಕಿನಲ್ಲಿ 5 ಹೆ., ತರೀಕೆರೆ 67 ಹೆಕ್ಟೇರ್‍ನಲ್ಲಿ ನಾಶವಾಗಿದೆ.
ಪಪ್ಪಾಯ ಕಡೂರು ತಾಲೂಕುವೊಂದರಲ್ಲೆ 11 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದ್ದರೇ, ಟೊಮ್ಯಾಟೋ ಕಡೂರು 96, ತರೀಕೆರೆ 2.30 ಹೆ. ಪ್ರದೇಶದಲ್ಲಿ ನಾಶವಾಗಿದೆ. ಹಸಿರುಮೆಣಸಿನಕಾಯಿ ಕಡೂರು ತಾಲೂಕಿನಲ್ಲಿ 91 ಹೆಕ್ಟೇರ್‍ನಲ್ಲಿ ನಾಶವಾಗಿದ್ದು, ಜೋಳ ಚಿಕ್ಕಮಗಳೂರು ತಾಲೂಕಿನಲ್ಲಿ 110 ಹೆ., ತರೀಕೆರೆಯಲ್ಲಿ 250 ಹೆಕ್ಟೇರ್‍ನಲ್ಲಿ ನಾಶವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಹತ್ತಿ 14 ಹೆಕ್ಟೇರ್ ಪ್ರದೇಶದಲ್ಲಿ ಹಾಳಾಗಿದೆ ಎಂದು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದ್ದು, ಜಿಲ್ಲೆಯ ಬಯಲು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಮತ್ತೆ ಮಳೆಯಾಗಿ ಬೆಳೆ ಹಾನಿಯಾಗಿರುವುದರಿಂದ ವಿವಿಧ ತಂಡಗಳ ಮೂಲಕ ಹಾನಿಯ ಸಮೀಕ್ಷೆ ಮುಂದುವರಿದಿದೆ.
ಜು.21ರಿಂದ ಆ.5ರವರಗೆ ನಡೆದ ಸಮೀಕ್ಷೆಯಲ್ಲಿ ನರಸಿಂಹರಾಜಪುರದಲ್ಲಿ ಬಾಳೆ 5.60 ಹೆಕ್ಟೇರ್‍ನಲ್ಲಿ ನಾಶವಾಗಿತ್ತು. ನರಸಿಂಹರಾಜಪುರ ತಾಲೂಕಿನಲ್ಲಿ ಅಡಿಕೆ 176 ಹೆ., ಶೃಂಗೇರಿ 7, ಕೊಪ್ಪ 7 ಹೆಕ್ಟೇರ್‍ನಲ್ಲಿ ನಾಶವಾಗಿತ್ತು. ಶುಂಠಿ ನರಸಿಂಹರಾಜಪುರದಲ್ಲಿ 4 ಹೆಕ್ಟೇರ್, ಏಲಕ್ಕಿ ಮೂಡಿಗೆರೆಯಲ್ಲಿ 80 ಗುಂಟೆಯಲ್ಲಿ ಹಾಳಾಗಿತ್ತು. ಭತ್ತ ನ.ರಾ.ಪುರದಲ್ಲಿ 325 ಹೆಕ್ಟೇರ್, ಭತ್ತ ಚಿಕ್ಕಮಗಳೂರು 4, ನರಸಿಂಹರಾಜಪುರದಲ್ಲಿ 325 ಹಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 533.11 ಹೆಕ್ಟೇರ್‍ನಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಶೃಂಗೇರಿ ತಾಲೂಕೊಂದರಲ್ಲೇ ಗರಿಷ್ಟ 290 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ನಾಶವಾಗಿತ್ತು.
ಜಿಲ್ಲೆಯಲ್ಲಿ ಸದ್ಯ ಆಗಾಗ್ಗೆ ಭಾರೀ ಮಳೆ ಸುರಿಯುತ್ತಿದ್ದು, ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ತಂಡದಿಂದ ಬೆಳೆ ಹಾನಿಯ ಜಂಟಿ ಸಮೀಕ್ಷೆ ಮುಂದುವರೆದಿದೆ. ಅಂತಿಮ ಅಂದಾಜನ್ನು ಸಿದ್ಧಪಡಿಸಿ ನಷ್ಟದ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಪರಿಹಾರಧನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗುವುದು.
- ಬಿ.ಎಸ್.ರೂಪಾ, ಅಪರ ಜಿಲ್ಲಾಧಿಕಾರಿ







