ಬೆಂಗಳೂರು: ವಿಚಾರಣೆ ನೆಪದಲ್ಲಿ ಯುವಕನ ಗಡ್ಡ ಕತ್ತರಿಸಿ ಠಾಣೆಯಲ್ಲಿ ಚಿತ್ರಹಿಂಸೆ; ಆರೋಪ

ಬೆಂಗಳೂರು, ಡಿ.4:ಯುವಕನೊಬ್ಬನನ್ನು ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆದೊಯ್ದ ಇಲ್ಲಿನ ಬ್ಯಾಟರಾಯನಪುರ ಪೊಲೀಸರು, ಆತನ ಗಡ್ಡ ಕತ್ತರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.
ತೌಸೀಫ್ ಎಂಬಾತನ ಯುವಕನ ಮೇಲೆ ಹಲ್ಲೆ ನಡೆಸಿರುವ ದೂರು ಕೇಳಿಬಂದಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಏನಿದು ಘಟನೆ?: ತೌಸಿಫ್ ಅವರ ಮನೆಯಲ್ಲಿ ಬಾಡಿಗೆಗಿದ್ದ ಯುವತಿಗೆ ಬಿಹಾರ ಮೂಲದ ವ್ಯಕ್ತಿಯೊಬ್ಬ ವಾಟ್ಸಪ್ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ತೌಸೀಫ್ ಗಮನಕ್ಕೆ ತಂದಿದ್ದಾಳೆ.ನಂತರ, ಈ ಬಗ್ಗೆ ವಿಚಾರಿಸಲು ತೌಸಿಫ್ ಬಿಹಾರದ ಯುವಕನನ್ನು ಕರೆದಿದ್ದಾನೆ.
ಅಷ್ಟಕ್ಕೇ ಬಿಹಾರದ ಯುವಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಇದನ್ನೇ ನೆಪವಾಗಿಸಿಕೊಂಡು ಬ್ಯಾಟರಾಯನಪುರ ಪೊಲೀಸರು, ಡಿ. 1ರ ಮಧ್ಯರಾತ್ರಿ ಒಂದು ತೌಸಿಫ್ ಮನೆಗೆ ಏಕಾಏಕಿ ನುಗ್ಗಿ ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆದೊಯ್ಯುತ್ತಾರೆ.
ನಂತರ, ಎಎಸ್ಸೈ ಎನ್.ಕೆ.ಹರೀಶ್ ಮತ್ತು ಸಿಬ್ಬಂದಿ ತೌಸೀಫ್ ಮೇಲೆ ಹಲ್ಲೆ ನಡೆಸಿ ಆತನ ಗಡ್ಡವನ್ನು ಕತ್ತರಿಸಿದ್ದಾರೆ ಎಂದು ತೌಸಿಫ್ ಪೋಷಕರು ಆರೋಪಿದ್ದಾರೆ.
ಪ್ರತಿಭಟನೆ: ಯುವಕನ ಮೇಲೆ ದೌರ್ಜನ್ಯ ಖಂಡಿಸಿ ಪಿಎಫ್ಐ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ, ಪ್ರತಿಭಟನೆ ನಡೆಸಿದರು.
ಬಳಿಕ, ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ, ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.







