ಗೌರಿ ಲಂಕೇಶ್ ಹೆಸರಿನಲ್ಲಿ ಕಾರ್ಮಿಕರಿಗಾಗಿ ಉಚಿತ ಆ್ಯಂಬುಲೆನ್ಸ್ ಸೇವೆ

ಬೆಂಗಳೂರು, ಡಿ.4: ಯುವ ಪತ್ರಕರ್ತರಿಗೆ ಸದಾ ಸ್ಪೂರ್ತಿಯಾಗಿರುವ ಪತ್ರಕರ್ತೆ ಗೌರಿ ಲಂಕೇಶ್ ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದೆ. ಜೀವನೋಪಾಯಕ್ಕಾಗಿ ನಗರಕ್ಕೆ ಬಂದು ನೆಲೆಸಿರುವ ಕಾರ್ಮಿಕರಿಗೆ ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದೆ ಎಂದು ಹುತಾತ್ಮೆ ಗೌರಿ ಲಂಕೇಶ್‍ರ ಸಹೋದರಿ ಕವಿತಾ ಲಂಕೇಶ್ ತಿಳಿಸಿದ್ದಾರೆ.
ಶನಿವಾರದಂದು ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ನಗರಕ್ಕೆ ಹಳ್ಳಿಗಳಿಂದ ಬರುವ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಗೌರಿ ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಕಾರ್ಮಿಕರು 8123645998ಗೆ ಕರೆ ಮಾಡಿ, ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಪಡೆಯಬಹುದಾಗಿದೆ ಎಂದರು.
ಅಖಿಲ ಭಾರತ ಶ್ರಮಿಕ್ ಸ್ವರಾಜ್ ಕೇಂದ್ರದ ಮಾಧ್ಯಮ ಸಲಹೆಗಾರ ಆರ್. ಕಲೀಂ ಉಲ್ಲಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಶ್ರಮಿಕ ಸ್ವರಾಜ್ ಕೇಂದ್ರದ ವತಿಯಿಂದ ಗೌರಿ ಲಂಕೇಶ್ ಹೆಸರಿನ ಆ್ಯಂಬುಲೆನ್ಸ್ ಸೇವೆಗೆ ಕವಿತಾ ಲಂಕೇಶ್ ನಗರದ ಪ್ರೆಸ್‍ಕ್ಲಬ್ ಆವರಣದಲ್ಲಿ ಚಾಲನೆ ನೀಡಿದರು. ಲೇಬರ್ ಪಾರ್ಟಿ ಆಫ್ ಇಂಡಿಯಾದ ಅದ್ಯಕ್ಷ ಆದಿನಾರಾಯಣ, ಸಾಜಿದಾ ಬೇಗಂ, ಮುಬಾರಕ್, ಮಹಮ್ಮದ್ ಶಾಹೀದ್ ವೀರಸಂಗಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸರಕಾರದಿಂದ ಹಂತಕರನ್ನು ರಕ್ಷಿಸುವ ಕೆಲಸ
ಗೌರಿ ಲಂಕೇಶ್ ಮತ್ತು ಎಂ.ಎಂ. ಕಲಬುರ್ಗಿ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆಯಾಗಿದೆ. ರಾಜ್ಯ ಸರಕಾರ ಹತ್ಯಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣ ಹಂತಕರಿಗೆ ಇಂದಿಗೂ ಶಿಕ್ಷೆಯಾಗಿಲ್ಲ. ಪ್ರಕರಣಗಳನ್ನು ಎಸ್‍ಐಟಿ ತನಿಖೆಗೆ ವಹಿಸಿರುವ ರಾಜ್ಯ ಸರಕಾರ, ನಿರ್ಭಯ ಪ್ರಕರಣದಂತೆ ರಾಜ್ಯದಲ್ಲೂ ವಿಶೇಷ ನ್ಯಾಯಾಲಯವನ್ನು ಏಕೆ ರಚಿಸಲಿಲ್ಲ. ರಾಜ್ಯ ಸರಕಾರವು ಹಂತಕರನ್ನು ಶಿಕ್ಷಿಸುವ ಬದಲಿಗೆ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ವಿಚಾರವಾದಿಗಳ ಹತ್ಯೆ ಹಿಂಸೆಯನ್ನು ಎತ್ತಿ ಹಿಡಿಯುತ್ತದೆ. ಹಿಂಸೆಯನ್ನು ಬೆಂಬಲಿಸುವ ಸರಕಾರಗಳು ಹಿಂಸೆಯಿಂದಲೇ ಸರ್ವನಾಶವಾಗುತ್ತದೆ.
-ಮೋಹನ್‍ರಾಜ್, ರಾಜ್ಯಾಧ್ಯಕ್ಷರು, ದಸಂಸ(ಭೀಮಾವಾದ)







