ಭಾರೀ ಮಳೆಗೆ ದಲಿತ ಮುಖಂಡ ದಿ.ಪ್ರೊ.ಬಿ.ಕೃಷ್ಣಪ್ಪರ ಮನೆ ಕುಸಿತ: ಪುನರ್ನಿರ್ಮಿಸಿ ಸ್ಮಾರಕವಾಗಿಸಲು ಒತ್ತಾಯ

ದಾವಣಗೆರೆ: ದಲಿತ ಸಮುದಾಯದಲ್ಲಿ ಹೋರಾಟದ ಜಾಗೃತಿ ಮೂಡಿಸಿದ ದಲಿತ ಮಹಾನ್ ಚೇತನ ಪ್ರೊ.ಬಿ.ಕೃಷ್ಣಪ್ಪ ಅವರು ಜನಿಸಿದ ಮನೆ ಮಳೆಯಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಶಿವಮೊಗ್ಗದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಮನೆಯನ್ನು ಸ್ಮಾರಕ ಮಾಡಿದಂತೆ ಇಲ್ಲಿಯೂ ಸ್ಮಾರಕ ಮಾಡುವಂತೆ ದಲಿತ ಸಂಘಟನೆಗಳು ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಸಹ ಇನ್ನೂ ಸಕಾರಗೊಂಡಿಲ್ಲ.
ಅಸ್ಪೃಶ್ಯತೆ ನಿರ್ಮೂಲನೆ, ಜಾತಿ ನಿರ್ಮೂಲನೆ, ಸರ್ವರಿಗೂ ಶಿಕ್ಷಣ, ಮೌಢ್ಯ, ಕಂದಾಚಾರ ನಿರ್ಮೂಲನೆ, ಭೂ ರಹಿತರಿಗೆ ಭೂಮಿ ಹಂಚಿಕೆ ಹೀಗೆ ಹತ್ತು ಹಲವಾರು ವಿಷಯಗಳನ್ನು ಆಧರಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿ ರಾಜ್ಯದ ಉದ್ದಗಲಕ್ಕೂ ಹೋರಾಟ, ಧರಣಿ ನಡೆಸಿ ತುಳಿತಕ್ಕೊಳಗಾದ ಸಮುದಾಯಕ್ಕೆ ನ್ಯಾಯ ಕೊಡಿಸಿದ ಪ್ರೊ.ಬಿ.ಕೃಷ್ಣಪ್ಪ ಅವರು ಹುಟ್ಟಿ ಬೆಳೆದ ಮನೆಗೆ ಕಾಯಕಲ್ಪಬೇಕಿದೆ.
ಹರಿಹರದ ಪರಿಶಿಷ್ಟರ ಕಾಲೋನಿಯಲ್ಲಿ ಹುಟ್ಟಿ ಬೆಳೆದವರು. ಬಸಪ್ಪ ಮತ್ತು ಚೌಡಮ್ಮ ದಂಪತಿಗೆ ನಾಲ್ವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಸೇರಿ ಏಳು ಜನ ಮಕ್ಕಳಿದ್ದು, ಪ್ರೊ.ಬಿ.ಕೃಷ್ಣಪ್ಪನವರೇ ಮೊದಲಿಗರಾಗಿದ್ದು 1938, ಜೂನ್ 9" ರಂದು ಜನಿಸಿದರು. ಈಗ ಎಲ್ಲರೂ ಕಾಲವಾಗಿ ಓರ್ವ ಸಹೋದರಿ ಮಾತ್ರ ಬದುಕಿದ್ದಾರೆ. ಪೂರ್ವಜರು ಕಟ್ಟಿಸಿದ ಸುಮಾರು 90 ವರ್ಷದ ಮನೆಯಲ್ಲಿ ಪ್ರೊ.ಬಿ.ಕೃಷ್ಣಪ್ಪ ಸಹೋದರ ಹರಿಯಪ್ಪ ಅವರ ಮಕ್ಕಳು ವಾಸವಾಗಿದ್ದು, ಇತ್ತೀಚೆಗೆ ಸುರಿದ ವರ್ಷಧಾರೆಗೆ ನೆಲಕಚ್ಚಿದೆ.
ನಿವೃತ್ತ ನ್ಯಾಯಾಧೀಶರಾದ ಕಾಳಪ್ಪ ಗೋಕಳೆ ಸೇರಿದಂತೆ ಹಲವು ಅಧಿಕಾರಿಗಳು, ರಾಜ್ಯದ ಡಿಎಸ್‍ಎಸ್ ಮುಖಂಡರು ಭೇಟಿ ನೀಡಿ, ಸ್ಮಾರಕಕ್ಕೆ ಒತ್ತಾಯಿಸಿದ್ದಾರೆ. ಅದರೆ, ಇನ್ನು ಇದು ಸಾಕಾರಗೊಂಡಿಲ್ಲ. ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಸಂಸ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಈಚೆಗೆ ದಾವಣಗೆರೆಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.
ದಲಿತ ಪ್ರಗತಿಗಾಗಿ ಶ್ರಮಿಸಿದ ಮಹಾನಚೇತನ ಪ್ರೋ.ಬಿ.ಕೃಷ್ಣಪ್ಪ ಹುಟ್ಟಿಬೆಳೆದ ಮನೆ ಸ್ಮಾರಕವಾಗಬೇಕು. ಅದರ ಜೊತೆಗೆ ಅಲ್ಲಿ ವಾಸಿಸುವವ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.
ಗುರುಮೂರ್ತಿ -ಡಿಎಸ್ಸೆಸ್ ರಾಜ್ಯ ಸಂಚಾಲಕ
ದಲಿತರ ಆಶಾ ಕಿರಣ ಪ್ರೊ.ಬಿ.ಕೃಷ್ಣಪ್ಪ ಹುಟ್ಟಿದ ಮನೆಯನ್ನು ಸ್ಮಾರಕ ಮಾಡಬೇಕು. ನಮ್ಮ ನಿಲುವು ಆಗಿದೆ. ಹುಟ್ಟಿ ಬೆಳೆದ ಮನೆ ಬಿದ್ದಿದ್ದು, ಹಾಲಿ ವಾಸವಾಗಿರುವ ಅವರ ಸಹೋದರ ಮಕ್ಕಳಿಗೆ ಬೇರೆ ಕಡೆ ಮನೆ ನಿರ್ಮಿಸಿಕೊಟ್ಟು, ಸ್ಮಾರಕ ಮಾಡಬೇಕು. ನಿರಂತರವಾಗಿ ಹೋರಾಟ ಮಾಡುತ್ತೇವೆ.
ಪಿ.ಜೆ. ಮಹಾಂತೇಶ, ಡಿಎಸ್ಸೆಸ್ ತಾಲೂಕು ಸಂಚಾಲಕ, ಹರಿಹರ.







