ಕೋವಿಡ್ ಕುರಿತು ಖಿನ್ನತೆಗೊಳಗಾಗಿ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದ ವೈದ್ಯ

Photo: www.dailythanthi.com
ಕಾನ್ಪುರ, ಡಿ. 4: ಕೋವಿಡ್ ಭೀತಿಯಿಂದ ಖಿನ್ನತೆಗೆ ಒಳಗಾದ 61 ವರ್ಷದ ವೈದ್ಯರೊಬ್ಬರು ತನ್ನ ಪತ್ನಿ ಹಾಗೂ ಮಕ್ಕಳನ್ನು ಹತ್ಯೆಗೈದ ಘಟನೆ ಉತ್ತರಪ್ರದೇಶದ ಕಾನ್ಪುರದ ಕಲ್ಯಾಣಪುರದಲ್ಲಿ ನಡೆದಿದೆ.
ಖಾಸಗಿ ವೈದ್ಯಕೀಯ ಕಾಲೇಜಿನ ವಿಧಿಜ್ಞಾನ ವಿಭಾಗದ ಮುಖ್ಯಸ್ಥ ಸುಶೀಲ್ ಕುಮಾರ್ ಅವರು ಪತ್ರ ಬರೆದಿಟ್ಟು ಈ ಕೃತ್ಯ ಎಸಗಿದ್ದಾರೆ. ಪತ್ರದಲ್ಲಿ ಸುಶೀಲ್ ಕುಮಾರ್, ತಾನು ಗುಣವಾಗದ ರೋಗದಿಂದ ಬಳಲುತ್ತಿದ್ದೇನೆ. ಕೋವಿಡ್ ಯಾರನ್ನೂ ಬಿಡುವುದಿಲ್ಲ ಎಂದು ಬರೆದಿದ್ದಾರೆ.
ಶುಕ್ರವಾರ ಸಂಜೆ ಸುಶೀಲ್ ಕುಮಾರ್ ಅವರು ತನ್ನ ಸಹೋದರ ಸುನೀಲ್ಗೆ ಪಠ್ಯ ಸಂದೇಶ ಕಳುಹಿಸಿದ್ದು, ತಾನು ಮಾಡಿರುವ ಹತ್ಯೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಸುನೀಲ್ ಅವರು ಸುಶೀಲ್ ಕುಮಾರ್ ಇದ್ದ ಅಪಾರ್ಟ್ಮೆಂಟ್ಗೆ ಧಾವಿಸಿದಾಗ ಮನೆಗೆ ಬೀಗ ಹಾಕಿರುವುದು ಕಂಡು ಬಂತು.
ಭದ್ರತಾ ಸಿಬ್ಬಂದಿಯ ಸಹಾಯದಿಂದ ಬೀಗ ಒಡೆದು ಪ್ರವೇಶಿಸದಾಗ ಸುಶೀಲ್ ಕುಮಾರ್ ಪತ್ನಿ ಚಂದ್ರಪ್ರಭಾ (48), ಮಕ್ಕಳಾದ ಎಂಜಿನಿಯರಿಂಗ್ ವಿದ್ಯಾರ್ಥಿ ಶಿಖರ್ ಸಿಂಗ್ (18), ಪ್ರೌಢ ಶಾಲೆ ವಿದ್ಯಾರ್ಥಿನಿ ಖುಷಿ ಸಿಂಗ್ ಅವರ ಮೃತದೇಹ ಪ್ರತ್ಯೇಕ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಯಿತು.
ಈ ಮೂವರನ್ನು ಶುಕ್ರವಾರ ಬೆಳಗ್ಗೆ ಹತ್ಯೆಗೈಯಲಾಗಿದೆ. ಸುಶೀಲ್ ಕುಮಾರ್ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸುಶೀಲ್ ಕುಮಾರ್ ಅವರನ್ನು ಬಂಧಿಸಲು ಹಲವು ತಂಡಗಳನ್ನು ರೂಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಆಸಿಮ್ ಅರುಣ್ ಅವರು ಹೇಳಿದ್ದಾರೆ.







