ಗುಜ್ಜರಕೆರೆ ಹಾಸ್ಟೆಲ್ ವಿದ್ಯಾರ್ಥಿಗಳ ಗಲಾಟೆ ಪ್ರಕರಣ; ಬಂಧಿತ 4 ಆರೋಪಿಗಳು ಡ್ರಗ್ಸ್ ಸೇವನೆ ದೃಢ: ಕಮಿಷನರ್ ಶಶಿಕುಮಾರ್

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
ಮಂಗಳೂರು : ನಗರದ ಗುಜ್ಜರಕೆರೆ ಬಳಿ ಖಾಸಗಿ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿ ಗುಂಪುಗಳ ನಡುವಿನ ಹೊಡೆದಾಟ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿತ ಎಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕೇರಳ ಮೂಲದ ವಿದ್ಯಾರ್ಥಿಗಳಾದ ವಿಮಲ್ ರಾಜ್(20), ಮುಹಮ್ಮದ್ ಸಿ.(20), ಶಾರಿದ್(20), ಕಾನೆ ಜಾನ್ಸನ್ (19), ಫಹಾದ್ ಮುನಾಫ್(21), ಅಬು ತಾಹಿರ್ (23), ಮುಹಮ್ಮದ್(21), ಆದರ್ಶ್ (21) ಬಂಧಿತ ಆರೋಪಿಗಳು. ಇವರಲ್ಲಿ ನಾಲ್ವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಘಟನೆಗೆ ಸಂಬಂಧಿಸಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಸೇವನೆ ದೃಢಪಟ್ಟಿರುವ ಆರೋಪಿಗಳ ವಿಚಾರಣೆಯಿಂದ ಇನ್ನೂ ಹಲವು ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಹಾಗೂ ಇವರಿಗೆ ಪೂರೈಕೆ ಮಾಡುವವರ ಮಾಹಿತಿ ಲಭಿಸಿದೆ. ನಿನ್ನೆ ಹಾಸ್ಟೆಲ್ಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿ ನಾಯಕರು ಅಲ್ಲಿ ಪೊಲೀಸರು ವಿದ್ಯಾರ್ಥಿಗಳ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆಯೂ ಕೂಲಂಕಷ ತನಿಖೆ ನಡೆಯಲಿದೆ ಎಂದು ಅವರು ಹೇಳಿದರು.
ಗುಜ್ಜರಕೆರೆ ಹಾಸ್ಟೆಲ್ಗೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆಂಬ ಆರೋಪ ಸರಿಯಲ್ಲ. ಕೊಲೆ ಯತ್ನದಂತಹ ಪ್ರಕರಣ ನಡೆದಾಗ ಯಾವುದೇ ಸಂಸ್ಥೆ, ಸ್ಥಳಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಲು ಕಾನೂನಿನಲ್ಲಿ ಪೊಲೀಸರಿಗೆ ಅವಕಾಶವಿರುತ್ತದೆ. ಅದರಂತೆ ಅಧಿಕಾರಿ ಸಿಬ್ಬಂದಿ ಅಲ್ಲಿನ ಹಾಸ್ಟೆಲ್ ವಾರ್ಡನ್ರಿಗೆ ಪರಿಚಯಿಸಿಕೊಂಡೇ ಹೋಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದರು.
ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಆಯಾ ಠಾಣಾ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ಹಾಗೂ ರ್ಯಾಗಿಂಗ್ ಬಗ್ಗೆ ಸಭೆ ನಡೆಸಿ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಮುಂದಿನ ವಾರದಿಂದ ಮಂಗಳೂರು ಸೆಂಟ್ರಲ್ ಠಾಣಾ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲೂ ಜಾಗೃತಿ ಸಭೆ ನಡೆಸಲು ಅಗತ್ಯ ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳು ಕಾಲೇಜು, ಕ್ಯಾಂಪಸ್ನಲ್ಲಿ ಡ್ರಗ್ಸ್ ಸೇವನೆ, ಪೂರೈಕೆ ಮಾಡುವ ಕುರಿತಂತೆ ಕಾಲೇಜು ಆಡಳಿತ ಮಂಡಳಿಗಳು ಕೂಡಾ ನಿಗಾ ವಹಿಸಬೇಕು.
ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು







