ಕೆ.ಆರ್.ಪೇಟೆ: ಭಾರೀ ಮಳೆಗೆ ಹಳ್ಳ ದಾಟುತ್ತಿದ್ದ ಯುವಕ ಬೈಕ್ ಸಮೇತ ನೀರುಪಾಲು

ನೀರುಪಾಲಾಗಿ ನಾಪತ್ತೆಯಾಗಿರುವ ಉದಯ್
ಕೆ.ಆರ್.ಪೇಟೆ, ಡಿ.5: ಕೆ.ಆರ್.ಪೇಟೆಯಲ್ಲಿ ಶುಕ್ರವಾರ ರಾತ್ರಿ ವೇಳೆ ಧಾರಾಕಾರ ಮಳೆ ಸುರಿದಿದ್ದು, ಬೈಕಿನಲ್ಲಿ ಹಳ್ಳ ದಾಟುತ್ತಿದ್ದ ಯುವಕನೋರ್ವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುವ ಘಟನೆ ತಾಲೂಕಿನ ಸಾರಂಗಿ ಮತ್ತು ಶ್ಯಾರಹಳ್ಳಿ ಮಧ್ಯೆ ಇರುವ ಹೇಮಾವತಿ ಮೇಲ್ಗಾಲುವೆ ಸೇತುವೆಯ ಬಳಿ ನಡೆದಿರುವುದು ವರದಿಯಾಗಿದೆ.
ನೀರುಪಾಲಾದ ಯುವಕನನ್ನು ಕೈಗೋನಹಳ್ಳಿ ಗ್ರಾಮದ ಶಿವಲಿಂಗೇಗೌಡ ಎಂಬವರ ಪುತ್ರ ಉದಯ್(30) ಎಂದು ಗುರುತಿಸಲಾಗಿದೆ.
ಉದಯ್ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಿ ವಾಪಸ್ ಬರುತ್ತಿದ್ದಾಗ ಧಾರಾಕಾರ ಮಳೆ ಸುರಿಯುತ್ತಿತ್ತು. ಈ ವೇಳೆ ಸಾರಂಗಿ ಹೇಮಾವತಿ ಮೇಲ್ಗಾಲುವೆಯ ಕೆಳಭಾಗದಲ್ಲಿರರವ ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಉದಯ್ ಬೈಕಿನಲ್ಲಿ ಅದನ್ನು ದಾಟಲು ಮುಂದಾಗಿದ್ದಾರೆನ್ನಲಾಗಿದೆ. ಆದರೆ ಬೈಕ್ ಸಮೇತ ನೀರಿನ ಸೆಳೆತಕ್ಕೆ ಸಿಲುಕಿದ ಉದಯ್ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ತಕ್ಷಣ ಕೆ.ಆರ್.ಪೇಟೆ ಅಗ್ನಿಶಾಮಕ ದಳ ಠಾಣೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಉದಯ್ ಚಲಾಯಿಸುತ್ತಿದ್ದ ಬೈಕ್ ಪತ್ತೆಯಾಗಿದೆ. ಆದರೆ ಉದಯ್ ಪತ್ತೆಯಾಗಿಲ್ಲ. ಶೋಧ ಕಾರ್ಯ 2ನೆ ದಿನವಾದ ಇಂದು ಕೂಡಾ ಮುಂದುವರಿದಿದೆ.
ಸದರಿ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಶ್ಯಾರಹಳ್ಳಿ, ಗೊರವಿ, ಹೆತ್ತಗೋನಹಳ್ಳಿ ಗ್ರಾಮಗಳಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಇದೇ ಮಾರ್ಗವಾಗಿ ಓಡಾಡುತ್ತವೆ. ಹಾಗಾಗಿ ಕೂಡಲೇ ಈ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕು ಎಂಬುದು ಈ ಮಾರ್ಗದ ಪ್ರಯಾಣಿಕರ ಹತ್ತಾರು ವರ್ಷಗಳ ಒತ್ತಾಯವಾಗಿದೆ.







