ನಾಗಾಲ್ಯಾಂಡ್: ಭದ್ರತಾ ಪಡೆಯ ಗುಂಡಿನ ದಾಳಿಗೆ ಕನಿಷ್ಠ 13 ಮಂದಿ ಗ್ರಾಮಸ್ಥರು ಬಲಿ
ದಂಗೆಕೋರರೆಂದು 'ತಪ್ಪಾಗಿ ಭಾವಿಸಿ' ಫೈರಿಂಗ್

ಸಾಂದರ್ಭಿಕ ಚಿತ್ರ
ಗುವಾಹಟಿ,ಡಿ.5: ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಮೊನ್ ಜಿಲ್ಲೆಯಲ್ಲಿ ಶನಿವಾರ ನಡೆದ ಬಂಡಾಯ ನಿಗ್ರಹ ಕಾರ್ಯಾಚರಣೆಯು ಹಳಿ ತಪ್ಪಿದ್ದು ಭದ್ರತಾ ಪಡೆಗಳ ಗುಂಡಿಗೆ 13 ನಾಗರಿಕರು ಬಲಿಯಾಗಿದ್ದಾರೆ. ಓರ್ವ ಯೋಧನೂ ಬಲಿಯಾಗಿದ್ದಾನೆ. ಈ ಬಗ್ಗೆ ವಿಶೇಷ ತನಿಖಾ ತಂಡವು ತನಿಖೆಯನ್ನು ನಡೆಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಬಂಡುಕೋರರ ಸಂಭಾವ್ಯ ಚಲನವಲನಗಳ ಬಗ್ಗೆ ಮಾಹಿತಿ ಪಡೆದಿದ್ದ ಭದ್ರತಾ ಪಡೆಗಳು ಶನಿವಾರ ಅಪರಾಹ್ನ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು,ಓಟಿಂಗ್ ಗ್ರಾಮದ ಬಳಿ ಹೊಂಚು ಹಾಕಿದ್ದರು. ಸಂಜೆ ತಿರು-ಓಟಿಂಗ್ ರಸ್ತೆಯಲ್ಲಿ ಬರುತ್ತಿದ್ದ ವಾಹನದಲ್ಲಿದ್ದ ಗ್ರಾಮಸ್ಥರನ್ನು ಬಂಡುಕೋರರು ಎಂದು ಗ್ರಹಿಸಿ ಎಡವಟ್ಟು ಮಾಡಿಕೊಂಡ ಭದ್ರತಾ ಪಡೆಗಳು ಅವರ ಮೇಲೆ ಗುಂಡು ಹಾರಿಸಿದ್ದವು. ಪರಿಣಾಮ ಆರು ಗ್ರಾಮಸ್ಥರು ಸ್ಠಳದಲ್ಲಿಯೇ ಸಾವನ್ನಪ್ಪಿದ್ದು,ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರೆಳೆದಿದ್ದರು. ವಾಹನದಲ್ಲಿದ್ದವರು ಕೊನ್ಯಾಕ್ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು,15 ಕಿ.ಮೀ.ದೂರದ ಕಲ್ಲಿದ್ದಲು ಗಣಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ವಾರಾಂತ್ಯದ ರಜೆ ಕಳೆಯಲು ತಮ್ಮ ಮನೆಗಳಿಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಘಟನೆಯಿಂದ ಕ್ರುದ್ಧರಾಗಿದ್ದ ಸ್ಥಳೀಯರು ಭದ್ರತಾ ಪಡೆಗಳಿಗೆ ಮುತ್ತಿಗೆ ಹಾಕಿದ್ದರು. ‘ಆತ್ಮರಕ್ಷಣೆ’ಗಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಇನ್ನೂ ಐವರು ಗ್ರಾಮಸ್ಥರು ಮೃತಪಟ್ಟು,ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದವು. ಓರ್ವ ಯೋಧ ಕೂಡ ಸಾವನ್ನಪ್ಪಿದ್ದು,ಭದ್ರತಾ ಪಡೆಗಳ ಮೂರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಬಂಡುಕೋರರ ಸಂಭಾವ್ಯ ಚಲನವಲನಗಳ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಮೇರೆಗೆ ಮಾನ್ ಜಿಲ್ಲೆಯ ತಿರು ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಘಟನೆಯ ಬಗ್ಗೆ ತೀವ್ರವಾಗಿ ವಿಷಾದಿಸುತ್ತೇವೆ. ಈ ದುರದೃಷ್ಟಕರ ಘಟನೆಯ ಬಗ್ಗೆ ಅತ್ಯಂತ ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುವುದು ಮತ್ತು ಕಾನೂನಿನಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಘಟನೆಯಲ್ಲಿ ಭದ್ರತಾ ಪಡೆಗಳಿಗೂ ತೀವ್ರ ಗಾಯಗಳಾಗಿವೆ ಮತ್ತು ಓರ್ವ ಯೋಧ ಮೃತಪಟ್ಟಿದ್ದಾನೆ ಎಂದೂ ಅದು ತಿಳಿಸಿದೆ.
‘ನಾಗಾಲ್ಯಾಂಡ್ನಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಯ ಬಗ್ಗೆ ತೀವ್ರ ನೋವುಂಟಾಗಿದೆ, ಮೃತರ ಕುಟುಂಬಗಳಿಗೆ ನನ್ನ ಗಾಢ ಸಂತಾಪಗಳು. ರಾಜ್ಯ ಸರಕಾರವು ರಚಿಸಿರುವ ಉನ್ನತ ಮಟ್ಟದ ವಿಶೇಷ ತನಿಖಾ ತಂಡವು ತನಿಖೆಯನು ನಡೆಸಲಿದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯವನ್ನು ಒದಗಿಸಲಾಗುವುದು’ ಎಂದು ಅಮಿತ್ ಶಾ ಟ್ವೀಟಿಸಿದ್ದಾರೆ.
‘ಓಟಿಂಗ್ ನಲ್ಲಿ ನಾಗರಿಕರ ಹತ್ಯೆಗಳಿಗೆ ಕಾರಣವಾದ ಘಟನೆಯು ತೀವ್ರ ಖಂಡನೀಯವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳ ಶೀಘ್ರ ಚೇತರಿಕೆಯನ್ನು ಹಾರೈಸುತ್ತೇನೆ.ಉನ್ನತ ಮಟ್ಟದ ವಿಶೇಷ ತನಿಖಾ ತಂಡವು ತನಿಖೆಯನ್ನು ನಡೆಸಲಿದೆ ಮತ್ತು ಕಾನೂನಿಗನುಗುಣವಾಗಿ ನ್ಯಾಯವನ್ನು ಒದಗಿಸಲಾಗುವುದು ’ಎಂದು ಟ್ವೀಟಿಸಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೊ ಅವರು,ಶಾಂತಿಯನ್ನು ಕಾಯ್ದುಕೊಳ್ಳುವಂತೆ ಎಲ್ಲ ವರ್ಗಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ದಿಲ್ಲಿಯಲ್ಲಿದ್ದ ರಿಯು ವಿಷಯ ತಿಳಿಯುತ್ತಿದ್ದಂತೆಯೇ ರಾಜ್ಯಕ್ಕೆ ಮರಳಿದ್ದಾರೆ. ವದಂತಿಗಳ ಹರಡುವಿಕೆಯನ್ನು ತಡೆಯಲು ಮೊನ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮೊನ್ ಪ್ರದೇಶವು ನಾಗಾ ಬಂಡುಕೋರ ಗುಂಪು ಎನ್ಎಸ್ಸಿಎನ್(ಕೆ) ಮತ್ತು ಉಲ್ಫಾದ ಭದ್ರ ನೆಲೆಯಾಗಿದೆ. ಹಲವಾರು ರಾಜತಾಂತ್ರಿಕರು ಭಾಗವಹಿಸಿರುವ,ರಾಜ್ಯದ ಪ್ರಮುಖವಾದ ‘ಹಾರ್ನ್ಬಿಲ್ ಉತ್ಸವ’ದ ಸಂದರ್ಭದಲ್ಲಿಯೇ ಈ ದುರಂತ ಘಟನೆ ಸಂಭವಿಸಿದೆ.
ಗ್ರಾಮಸ್ಥರು ಕೊನ್ಯಾಕ್ ಸಮುದಾಯಕ್ಕೆ ಸೇರಿದ್ದು,ತಾನು ಉತ್ಸವದಿಂದ ದೂರವಿರುವುದಾಗಿ ಅದು ತಿಳಿಸಿದೆ. ಆರು ಇತರ ಬುಡಕಟ್ಟು ಸಮುದಾಯಗಳೂ ಉತ್ಸವದಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ.
The unfortunate incident leading to killing of civilians at Oting, Mon is highly condemnable.Condolences to the bereaved families & speedy recovery of those injured. High level SIT will investigate & justice delivered as per the law of the land.Appeal for peace from all sections
— Neiphiu Rio (@Neiphiu_Rio) December 5, 2021







