ಬಿಜೆಪಿ ಸೇರಿದರೆ ಕೇಂದ್ರ ಸಚಿವ ಸ್ಥಾನ, ಹಣ ನೀಡುವ ಆಮಿಷವೊಡ್ಡಲಾಗಿತ್ತು: ಆಪ್ ಸಂಸದ ಭಗವಂತ್ ಮಾನ್ ಆರೋಪ

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಸಂಸದ ಮತ್ತು ಪಕ್ಷದ ಪಂಜಾಬ್ ರಾಜ್ಯ ಅಧ್ಯಕ್ಷ ಭಗವಂತ್ ಮಾನ್ ಅವರು ಬಿಜೆಪಿಯ ಹಿರಿಯ ನಾಯಕರೊಬ್ಬರು ಪಕ್ಷಕ್ಕೆ ಸೇರಲು ಹಣ ಮತ್ತು ಕೇಂದ್ರ ಕ್ಯಾಬಿನೆಟ್ ಸ್ಥಾನದ ಆಮಿಷವೊಡ್ಡಿದ್ದರು ಎಂದು ರವಿವಾರ ಆರೋಪಿಸಿದ್ದಾಗಿ Indianexpress.com ವರದಿ ಮಾಡಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾನ್, ಪಂಜಾಬ್‌ನಲ್ಲಿ ಅನೇಕ ಎಎಪಿ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಮತ್ತು ಅವರಿಗೂ ಇದೇ ರೀತಿಯ ಆಮಿಷಗಳನ್ನು ಮಾಡಲಾಗಿದೆ ಎಂದು ಆರೋಪಿಸಿದರು.
“ಬಿಜೆಪಿಗೆ ಸೇರಲು ನಾನು ಎಷ್ಟು ಹಣವನ್ನು ಪಡೆದುಕೊಳ್ಳುತ್ತೇನೆ? ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿದರು. ನಾನು ಆಮ್ ಅದ್ಮಿ ಪಕ್ಷದ ಏಕೈಕ ಸಂಸದನಾಗಿರುವುದರಿಂದ, ನಾನು ಬಿಜೆಪಿಗೆ ಸೇರುವುದರಿಂದ ಪಕ್ಷಾಂತರ ವಿರೋಧಿ ಕಾನೂನಿನ ತೊಂದರೆಯಾಗುವುದಿಲ್ಲ ಮತ್ತು ಕೇಂದ್ರದಲ್ಲಿ ನನ್ನ ಆಯ್ಕೆಯ ಕ್ಯಾಬಿನೆಟ್ ಸ್ಥಾನವನ್ನು ನೀಡಲಾಗುವುದು ಎಂದು ಅವರು ಹೇಳಿದ್ದರು" ಎಂದು ಮಾ ಆರೋಪಿಸಿದ್ದಾರೆ.
ಪಂಜಾಬ್‌ನ ಸಂಗ್ರೂರ್‌ನಿಂದ ಎರಡು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿರುವ ಅವರು, ತಾನು "ಮಿಷನ್‌ನಲ್ಲಿದ್ದೇನೆ ಮತ್ತು ಕಮಿಷನ್ ನಲ್ಲಿ ಅಲ್ಲ" ಎಂದು ಹೇಳುವ ಮೂಲಕ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ ಎಂದು ಹೇಳಿದರು. "ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವನ್ನು ರಕ್ತ ಮತ್ತು ಬೆವರಿನ ಮೂಲಕ ಬೆಳೆಸಿದ್ದೇನೆ ಮತ್ತು ಪಕ್ಷವನ್ನು ತ್ಯಜಿಸುವುದಿಲ್ಲ" ಎಂದು ಅವರು ಹೇಳಿದರು.
"ಪಂಜಾಬ್‌ನಲ್ಲಿ ಬಿಜೆಪಿಗೆ ಯಾವುದೇ ಸ್ಥಾನಮಾನವಿಲ್ಲ. 700 ಕ್ಕೂ ಹೆಚ್ಚು ರೈತರ ಸಾವಿಗೆ ಕಾರಣವಾದ ಮೂರು ಕೃಷಿ ಕಾನೂನುಗಳಿಂದಾಗಿ ಪಕ್ಷದ ನಾಯಕರಿಗೆ ಹಳ್ಳಿಗಳನ್ನು ಪ್ರವೇಶಿಸಲು ಸಹ ಅನುಮತಿಸಲಾಗುವುದಿಲ್ಲ. ಪಂಜಾಬ್‌ನ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಯಾರೂ ಲಖಿಂಪುರ ಖೇರಿಯಲ್ಲಿ ಹಲವಾರು ಜನರ ಸಾವಿಗೆ ಕಾರಣವಾದ ಪಕ್ಷವನ್ನು ಸೇರುವುದಿಲ್ಲ,” ಎಂದು ಅವರು ಹೇಳಿದರು.







