ಶೀಘ್ರವೇ ಉಡುಪಿ ಜಿಲ್ಲೆಯಲ್ಲಿ ಶೇ.100 ಲಸಿಕೆ ಗುರಿ ಸಾಧನೆ: ಡಿಸಿ ಕೂರ್ಮಾರಾವ್
ಕಾರ್ಮಿಕರು, ವಲಸಿಗರಿಗೆ ವಿಶೇಷ ಕೋವಿಡ್ ಲಸಿಕಾ ಅಭಿಯಾನ

ಉಡುಪಿ, ಡಿ.5: ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಲಸಿಕೆಯ ಪ್ರಥಮ ಡೋಸ್ ಶೇ.94.5 ಹಾಗೂ ಎರಡನೇ ಡೋಸ್ ಶೇ.74ರಷ್ಟು ಸಾಧನೆ ಮಾಡಲಾಗಿದೆ. ಶೀಘ್ರದಲ್ಲಿ ಜಿಲ್ಲೆಯಲ್ಲಿ ಶೇ.100 ಲಸಿಕೆ ಗುರಿ ಸಾಧಿಸಲು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಜಿಲ್ಲೆಯ ಪ್ರತಿಯೊಬ್ಬ ನಾಗರೀಕರು ಎರಡು ಡೋಸ್ ಲಸಿಕೆ ಪಡೆಯುವುದರ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲೆಯ ಕೂಲಿಕಾರ್ಮಿಕರು ಹಾಗೂ ವಲಸಿಗರಿಗೆ ರವಿವಾರ ಏರ್ಪಡಿಸಲಾದ ವಿಶೇಷ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಶ್ರೀಕೃಷ್ಣ ಮಠದಿಂದ ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿರಿಗೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇದ್ದವರಿಗೆ ಉಚಿತ ಆಹಾರ ಒದಗಿಸಿರುವುದಲ್ಲದೇ, ಜಿಲ್ಲಾಡಳಿತಕ್ಕೆ ಸುಸಜ್ಜಿತ ಆಂಬುಲೆನ್ಸ್ ನೀಡುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಅತ್ಯುತ್ತಮ ಬೆಂಬಲ ನೀಡಿದೆ. ಅಲ್ಲದೇ ಕೋವಿಡ್ ಸಮುಚಿತ ವರ್ತನೆಗಳ ಪಾಲನೆ ಕುರಿತು ಸ್ವಾಮೀಜಿಗಳ ಸಂದೇಶ ಪ್ರತಿ ಮನೆ ಮನೆಗಳಿಗೆ ತಲುಪಿದ್ದು, ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯ ಹೆಚ್ಚಳ ತಡೆಯಲು ಸಾಧ್ಯವಾಗಿದೆ ಎಂದರು.
ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಭಗವಂತನ ಸೇವೆಯನ್ನು ಪ್ರತಿಮೆ ಮತ್ತು ಸಮಾಜ ಸೇವೆಯ ಮೂಲಕ ಮಾಡಬಹುದು. ಸಮಾಜಸೇವೆ ಮೂಲಕ ಭಗವಂತನಿಗೆ ನಾವು ತೆರಿಗೆ ನೀಡಬೇಕು. ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆಯನ್ನು ತಪ್ಪದೇ ಪಾಲಿಸಬೇಕು. ಯಾವುದೇ ರೂಪಾಂತರಿ ವೈರಸ್ ಬಂದರೂ ಸಹ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವುದರಿಂದ, ರೋಗ ಮುಕ್ತರಾಗಬಹುದು ಎಂದರು.
ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಕೋವಿಡ್ ಲಸಿಕಾ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹೇಮಂತ್ , ಕಿರುತೆರೆ ನಟ ಎಂ.ಎಸ್. ಸೇತುರಾಂ ಮತಿತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜು ಸ್ವಾಗತಿಸಿದರು. ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







