1023 ಬಡ ವಿದ್ಯಾರ್ಥಿಗಳಿಗೆ 74.10 ಲಕ್ಷ ರೂ. ವಿದ್ಯಾಪೋಷಕ್ ಸಹಾಯಧನ ವಿತರಣೆ

ಉಡುಪಿ, ಡಿ.5: ಯಕ್ಷಗಾನ ಕಲಾರಂಗ, ವಿದ್ಯಾಪೋಷಕ್ ವತಿಯಿಂದ ರವಿವಾರ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಭಾಭವನದಲ್ಲಿ ಜರಗಿದ ವಿನಮ್ರ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ 1023 ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 74.10 ಲಕ್ಷ ರೂ. ಹಾಗೂ 3 ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ಮತ್ತು 2 ವಿದ್ಯಾಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರ ರೂಪಿಸಿ ಕೊಳ್ಳುವುದರಿಂದ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ತಾವು ಗಳಿಸಿದ ಸಂಪತ್ತಿನ ಒಂದಂಶವನ್ನಾದರೂ ಸಮಾಜಕ್ಕೆ ವಿನಿಯೋಗಿಸ ಬೇಕು. ಸಾಧಿಸುವ, ಛಲ ಗುರಿಯೊಂದಿಗೆ ಜೀವನ ರೂಪಿಸಿಕೊಂಡು ಇನ್ನೊಬ್ಬ ವಿದ್ಯಾಥಿಗರ್ಳಿಗೂ ನೆರವಾಗಬೇಕು ಎಂದರು.
ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ್ ಮಾತನಾಡಿ, ಗಳಿಸಿದ ಒಂದಂಶ ಸಮಾಜಕ್ಕೆ ಅರ್ಪಿಸಿ ಸಮಾಜದಲ್ಲಿರುವ ಒಂದಿಷ್ಟು ವ್ಯಕ್ತಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತ ಕಲಿಯುವ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ಜತೆಗೆ ಸಾಮಾಜಿಕ ಸ್ಥಾನಮಾನವನ್ನು ಪಡೆಯುತ್ತ ಸಹಾಯ ಮಾಡಿದವರನ್ನು ನೆನೆದು, ಇನ್ನುಳಿದವರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮಂಗಳೂರು ಪ್ರೇರಣ ಇನ್ಫೋಸಿಸ್‌ನ ಪ್ರಮುಖ ರವಿರಾಜ್ ಬೆಳ್ಮ, ಉದ್ಯಮಿ ಗಳಾದ ಸಜಿತ್ ಹೆಗ್ಡೆ, ಯು.ವಿಶ್ವನಾಥ ಶೆಣೈ, ಸದಾಶಿವ ಭಟ್, ಹರಿಯಪ್ಪ ಕೊಟ್ಯಾನ್, ಪುರುಷೋತ್ತಮ ಪಟೇಲ್, ಸೆಲ್ಕೊ ಸೊಲಾರ್ ಸಂಸ್ಥೆಯ ಡಿಜಿಎಂ ಗುರುಪ್ರಸಾದ್ ಶೆಟ್ಟಿ, ನಿವೃತ್ತ ಅಧ್ಯಾಪಕ ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಎ್. ಎನ್.ಶೃಂಗೇಶ್ವರ್ ವಂದಿಸಿದರು.
ಕಾರ್ಯಕ್ರಮದ ಉದ್ಘಾಟನೆ: ಬೆಳಗ್ಗೆ ನಡೆದ ಕಾರ್ಯಕ್ರಮವನ್ನು ಪರ್ಯಾಯ ಅದಮಾರು ಮಠ ವಿಶ್ವಪ್ರಿಯ ತೀರ್ಥರು ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಎಚ್.ಎಸ್.ಶೆಟ್ಟಿ ವಹಿಸಿದ್ದರು.
ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಬಂಟಕಲ್ಲು ಎಸ್‌ಎಂವಿಟಿಟಿ ಕಾಲೇಜಿನ ಕಾರ್ಯದರ್ಶಿ ರತ್ನಕುಮಾರ್, ಲೆಕ್ಕ ಪರಿಶೋಧಕ ಸಿಎ ಗಣೇಶ್ ಕಾಂಚನ್, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್, ಡಾ.ಜೆ.ಎನ್.ಭಟ್, ಮೈಲೈಫ್ ಸಂಸ್ಥಾಪಕ ಪ್ರವೀಣ್ ಗುಡಿ ಭಾಗವಹಿಸಿದ್ದರು. ಕಲಾರಂಗದ ಎಸ್.ವಿ ಭಟ್ ಸ್ವಾಗತಿಸಿ, ಅಶೋಕ್. ಎಂ ವಂದಿಸಿ, ಗಣೇಶ್ ರಾವ್ ಎಲ್ಲೂರು ನಿರೂಪಿಸಿದರು.







