ಯುವ ಸಾಹಿತಿ ಮುದ್ದು ತಿರ್ಥಹಳ್ಳಿಗೆ ಸಾಹಿತ್ಯ ಪುರಸ್ಕಾರ ಪ್ರದಾನ

ಉಡುಪಿ, ಡಿ.5: ಕಥೊಲಿಕ್ ಸಭಾ ಉಡುಪಿ ಪ್ರದೇಶ, ಆಮ್ಚ ಸಂದೇಶ್ ಕೊಂಕಣಿ ಮಾಸಿಕ ಮತ್ತು ಕೊಂಕಣಿ ಸಂಘಟನೆ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರವಿವಾರ ಆಯೋಜಿಸಲಾದ ಆಮ್ಚೊಂ ಸಂದೇಶ್ ಪ್ರತಿನಿಧಿಗಳ ಮತ್ತು ಬರಹಗಾರರ ಸಮ್ಮೇಳನದಲ್ಲಿ ಯುವ ಸಾಹಿತಿಗಳಿಗೆ ನೀಡುವ ದಿ.ಜೋಸೆಫ್ ಮತ್ತು ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರವನ್ನು ವಿತಾಶಾ ರಿಯಾ ರೊಡ್ರಿಗಸ್ (ಮುದ್ದು ತೀರ್ಥಹಳ್ಳಿ) ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಮಾತನಾಡಿ, ಉತ್ತಮ ಬರಹಗಾರನಾಗ ಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಇದರಿಂದ ನಮ್ಮಲ್ಲಿ ಜ್ಞಾನದ ವೃದ್ದಿಯಾಗುತ್ತದೆ ಮತ್ತು ಬರೆಯುವ ಕಲೆ ನಮ್ಮಲ್ಲಿ ಹುಟ್ಟಿಕೊಂಡು ಮುಂದೆ ಸಮಾಜದಲ್ಲಿ ಉತ್ತಮ ಬರಹಗಾರ, ಸಾಹಿತಿಯಾಗಲು ಸಾಧ್ಯವಾಗುತ್ತದೆ ಎಂದರು.
ದೈಜಿ ವಲ್ಡ್ ಮಂಗಳೂರು ಬ್ಯೂರೊ ಮುಖ್ಯಸ್ಥ ಸ್ಟ್ಯಾನಿ ಬೇಳಾ ಪ್ರಚಲಿತ ಲೇಖನಗಳನ್ನು ಬರೆಯುವ ಕುರಿತು, ಆಮ್ಚೊ ಸಂದೇಶ್ ಪತ್ರಿಕೆಯ ವಿಲ್ಫ್ರೇಡ್ ಲೋಬೊ ಸಂಪಾದಕರಿಗೆ ಪತ್ರ ಬರೆಯುವ ಕುರಿತು, ಉಡುಪಿ ಧರ್ಮ ಪ್ರಾಂತ್ಯದ ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವರದಿಗಾರಿಕೆಯ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೇರಿ ಡಿಸೋಜ ವಹಿಸಿದ್ದರು. ಕಲ್ಯಾಣಪುರ ಸಂತೆಕಟ್ಟೆ ದಿವ್ಯದೀಪ ಪ್ರಕಾಶನದ ವತಿ ಯಿಂದ ಮರುಮುದ್ರಣಗೊಂಡ ರಾಕ್ಣೋ ವಾರಪತ್ರಿಕೆಯ ಮಾಜಿ ಸಂಪಾದಕ ವಂಮಾರ್ಕ್ ವಾಲ್ಡರ್ ಅವರ ಆತ್ಮಚರಿತ್ರೆ ಲೊಕಾಚೊ ಯಾಜಕ್ ಪುಸ್ತಕವನ್ನು ಅನಾವರಣಗೊಳಿಸಲಾಯಿತು.
ಕಥೊಲಿಕ್ ಸಭಾ ಉಡುಪಿ ಪ್ರದೇಶ ಪ್ರಧಾನ ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿಸೋಜ, ಮಾಜಿ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಆಮ್ಚಾ ಸಂದೇಶ್ ಸಂಚಾಲಕ ಎಲ್ರೋಯ್ ಕಿರಣ್ ಕ್ರಾಸ್ಟೊ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಕೋಶಾಧಿಕಾರಿ ಮೆಲ್ರಿಡಾ ರೊಡ್ರಿಗಸ್, ದಿ.ಜೋಸೆಪ್ ಮೇರಿ ಪಿಂಟೊ ನಿಡ್ಡೋಡಿ ಕುಟುಂಬಿಕರಾದ ವಾಲ್ಟರ್ ಸಿರಿಲ್ ಪಿಂಟೊ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಎಡ್ವರ್ಡ್ ಲಾರ್ಸನ್ ಡಿಸೋಜ ಪೇತ್ರಿ ಅತಿಥಿಗಳ ಪರಿಚಯ ಮಾಡಿದರು. ಕಲ್ಯಾಣಪುರ ವಲಯ ಅಧ್ಯಕ್ಷ ರೋಜಿ ಬಾರೆಟ್ಟೊ ವಂದಿಸಿದರು. ಡಾ ಫ್ಲಾವಿಯಾ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.







