ಧರ್ಮದಲ್ಲಿ ಸತ್ಯ ಪ್ರಾಮಾಣಿಕತೆ ಮುಖ್ಯ: ನಟ ಸೇತುರಾಂ

ಉಡುಪಿ, ಡಿ.5: ಧರ್ಮದಲ್ಲಿ ಸತ್ಯ ಪ್ರಾಮಾಣಿಕತೆ ಮುಖ್ಯ. ಯಾವುದೇ ಧರ್ಮವೂ ಇನ್ನೊಂದು ಧರ್ಮವನ್ನು ದ್ವೇಷಿಸುವುದಿಲ್ಲ. ಇನ್ನೊಬ್ಬರನ್ನು ಕೊಲ್ಲುವ ಹಾಗೂ ರಕ್ತಪಾತ ಮಾಡುವಂತೆ ಯಾವುದೇ ಧರ್ಮವೂ ಹೇಳಿಲ್ಲ ಎಂದು ಸಾಮಾಜಿಕ ಚಿಂತಕ, ಕಿರುತೆರೆ ನಟ, ನಿರ್ದೇಶಕ ಎಸ್.ಎನ್.ಸೇತುರಾಂ ಹೇಳಿದ್ದಾರೆ.
ಶ್ರೀಕೃಷ್ಣ ಮಠ, ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದ ಶ್ರಿನರಹರಿ ತೀರ್ಥ ವೇದಿಕೆಯಲ್ಲಿ ರವಿವಾರ ನಡೆದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಹಿಂದು ಧರ್ಮಗಳಲ್ಲಿ ಅನಿಷ್ಠ ಪದ್ಧತಿಗಳನ್ನು ಕಾಲಕಾಲಕ್ಕೆ ಕಸದಂತೆ ಸ್ವಚ್ಛ ಮಾಡಬೇಕೆ ಹೊರತು ಧರ್ಮವನ್ನೇ ಧೂಷಿಸುವುದು ಸರಿಯಲ್ಲ. ನಮ್ಮ ತಲೆ ಯಿಂದ ದಾಸ್ಯ ಎಂಬುದು ಇನ್ನು ಹೋಗಿಲ್ಲ. ದಾಸ್ಯ ಹೋದರೆ ಮಾತ್ರ ನಾವು ಸ್ವಾತಂತ್ರವಾಗಿ ಬದುಕಲು ಸಾಧ್ಯ. ಬ್ರಿಟೀಷರು ಒಂದು ಧರ್ಮವನ್ನು ಇನ್ನೊಂದು ಧರ್ಮದ ಮೇಲೆ ಎಕತ್ತಿ ಕಟ್ಟಿ ತಮ್ಮ ಬೇಳೆಯನ್ನು ಬೆಯಿಸಿ ಕೊಂಡಿದ್ದರು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಎಲ್ಲರಲ್ಲೂ ಇರುವ ಒಳ್ಳೆಯ ಅಂಶಗಳನ್ನು ಸ್ವೀಕಾರ ಮಾಡಬೇಕು. ಅದನ್ನು ಆಳವಡಿಸಿಕೊಂಡಾಗ ಜೀವನದ ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯ. ವಿಶ್ವಕ್ಕೆ ಭಾರತ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ನೀಡಿದೆ. ರಾಷ್ಟ್ರ ಹಿತ ಹಾಗೂ ಭಗವಂತ ಆರಾಧೆ ಇಂದಿನ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಚಿತ್ರಾಪುರ ಮಠದ ಶ್ರೀವಿದ್ಯೇಂದ್ರತೀರ್ಥ ಸ್ವಾಮೀಜಿ ಸಂದೇಶ ನೀಡಿದರು.
ಶಾಸಕ ಕೆ. ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಯೋಗೀಶ್ ಆಚಾರ್ಯ, ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಕಾರ್ಯನಿರ್ವಹಣಾಧಿಕಾರಿ ಮಹಾ ಬಲೇಶ್ವರ ಎಂ.ಎಸ್. ಉಪಸ್ಥಿತರಿದ್ದರು.
ಪ್ರಸನ್ನ ಆಚಾರ್ಯ ಹಾಗೂ ವಿ.ಶ್ರೀನಿವಾಸ ಆಚಾರ್ಯ ಕರ್ನೂಲು ಅವರನ್ನು ಸನ್ಮಾನಿಸಲಾಯಿತು. ಮಠದ ವಿಶೇಷ ಸೇವೆಗಾಗಿ ಹಲವು ಮಂದಿ ಯನ್ನು ಗೌರವಿಸಲಾಯಿತು. ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದ ರಾಜ್ ಸ್ವಾಗತಿಸಿದರು. ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.







