ಸೇನಾ ಘಟಕದ ವಿರುದ್ಧ ಎಫ್ ಐಆರ್ ದಾಖಲಿಸಿದ ನಾಗಾಲ್ಯಾಂಡ್ ಪೊಲೀಸರು
'ಭದ್ರತಾ ಪಡೆಗಳ 'ಉದ್ದೇಶ' ನಾಗರಿಕರನ್ನು ಕೊಲ್ಲುವುದು ಮತ್ತು ಗಾಯಗೊಳಿಸುವುದು'

ಹೊಸದಿಲ್ಲಿ: ಸೇನೆಯ 21 ಪ್ಯಾರಾ ವಿಶೇಷ ಪಡೆಗಳು " ಗುಂಡು ಹಾರಿಸಿದ" ಪರಿಣಾಮವಾಗಿ ಅಸ್ಸಾಂ ಗಡಿಯ ಸಮೀಪವಿರುವ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಅನೇಕ ಓಟಿಂಗ್ ಗ್ರಾಮಸ್ಥರು ಕೊಲ್ಲಲ್ಪಟ್ಟರು ಎಂದು ರಾಜ್ಯ ಪೊಲೀಸರು ಸೇನಾ ಘಟಕದ ವಿರುದ್ಧ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. ಭದ್ರತಾ ಪಡೆಗಳ "ಉದ್ದೇಶ" "ನಾಗರಿಕರನ್ನು ಕೊಲ್ಲುವುದು ಮತ್ತು ಗಾಯಗೊಳಿಸುವುದು" ಎಂದು ಪೊಲೀಸರು ಎಫ್ ಐಆರ್ ನಲ್ಲಿ ಮತ್ತಷ್ಟು ಆರೋಪಿಸಿದ್ದಾರೆ.
ಶನಿವಾರದಂದು ನಾಗಾಲ್ಯಾಂಡ್‌ನ ಇಂಡೋ-ಮ್ಯಾನ್ಮಾರ್ ಗಡಿ ಜಿಲ್ಲೆಯಲ್ಲಿ 13 ಗ್ರಾಮಸ್ಥರು ಹಾಗೂ ಒಬ್ಬ ಸೈನಿಕನನ್ನು ಕೊಲ್ಲಲಾಯಿತು. ರವಿವಾರದಂದು ಕೋಪಗೊಂಡ ಜನರ ಗುಂಪು ಮೋನ್ ಪಟ್ಟಣದಲ್ಲಿರುವ ಅಸ್ಸಾಂ ರೈಫಲ್ಸ್‌ನ ಶಿಬಿರಕ್ಕೆ ನುಗ್ಗಿ ಶಿಬಿರದ ಒಂದು ಭಾಗಕ್ಕೆ ಬೆಂಕಿ ಹಚ್ಚಿತು. ಆಗ ಅಸ್ಸಾಂ ರೈಫಲ್ಸ್‌ನ ಗುಂಡಿನ ದಾಳಿಯಲ್ಲಿ ಒಬ್ಬ ನಾಗರಿಕ ಕೊಲ್ಲಲ್ಪಟ್ಟರು.
"ಘಟನೆಯ ಸಮಯದಲ್ಲಿ ಯಾವುದೇ ಪೊಲೀಸ್ ಗೈಡ್ ಅಥವಾ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಗೆ ಪೊಲೀಸ್ ಮಾರ್ಗದರ್ಶನ ನೀಡಲು ಪೊಲೀಸ್ ಠಾಣೆಗೆ ಮನವಿ ಮಾಡಲಿಲ್ಲ ಎಂಬುದನ್ನು ಗಮನಿಸಬೇಕು. ಆದ್ದರಿಂದ ಭದ್ರತಾ ಪಡೆಗಳ ಉದ್ದೇಶವು ನಾಗರಿಕರನ್ನು ಹತ್ಯೆ ಮಾಡುವುದು ಹಾಗೂ ಗಾಯಗೊಳಿಸುವುದು ಎಂಬುದು ಸ್ಪಷ್ಟವಾಗಿದೆ" ಎಂದು ಎನ್‌ಡಿಟಿವಿಗೆ ಲಭಿಸಿರುವ ರಾಜ್ಯ ಪೊಲೀಸರ ಎಫ್‌ಐಆರ್ ಪ್ರತಿಯಲ್ಲಿ ಹೇಳಲಾಗಿದೆ.