ಬಿಜೆಪಿ ಬೆಂಬಲಿಸಿಲ್ಲ ಎಂದು ತಿಹಾರ್ ಜೈಲಿಗೆ ನೀವು ಕಳಿಸಿದ್ರಿ ನಾನು ಹೋದೆ: ಈಶ್ವರಪ್ಪಗೆ ಡಿಕೆ ಶಿವಕುಮಾರ್ ತಿರುಗೇಟು

ಬೆಳಗಾವಿ, ಡಿ. 6: ‘ನಾನು ಬಿಜೆಪಿ ಜತೆ ಹೋಗಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದರು, ಹೀಗಾಗಿ ಕಾರಾಗೃಹಕ್ಕೆ ಹೋಗಬೇಕಾಗಿ ಬಂತು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಬಿಜೆಪಿಯವರಿಗೆ ಬೆಂಬಲ ಕೊಡಲಿಲ್ಲ ಹಾಗೂ ಅವರೊಂದಿಗೆ ಹೋಗಲಿಲ್ಲ ಎಂದು ಕಾರಾಗೃಹಕ್ಕೆ ಹಾಕಿಸಿದರು. ಇದು ರಾಜ್ಯದ ಜನತೆಗೆ ಗೊತ್ತಿದೆ. ಈ ಸಂಬಂಧ ದಾಖಲೆಗಳು ಇವೆಯಲ್ಲಾ' ಎಂದು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಒಗ್ಗಟ್ಟಿನಿಂದ ಕೆಲಸ: ‘ನನಗೆ ಅತೀವ ಸಂತೋಷ ತಂದಿರುವ ವಿಚಾರವೆಂದರೆ ನಾನು ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಒಮ್ಮತದಿಂದ ಕೆಲಸ ಮಾಡುತ್ತಿರುವುದು. ಎಲ್ಲೂ ಒಂದೇ ಒಂದು ಅಪಸ್ವರ ಕೇಳಿ ಬಂದಿಲ್ಲ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಂದೆರಡು ಕಡೆ ಭಿನ್ನಾಭಿಪ್ರಾಯ ಇತ್ತು. ಅದು ನಿವಾರಣೆ ಆಗಿ ಈಗ ಎಲ್ಲೆಡೆ ಒಮ್ಮತದ ಅಭ್ಯರ್ಥಿ ಇದ್ದಾರೆ. ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ಪಕ್ಷದ ಮೊದಲ ಗೆಲುವು' ಎಂದು ಅವರು ತಿಳಿಸಿದರು.
ಆದರೆ, ಬಿಜೆಪಿಯಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಒಮ್ಮತದ ಅಭ್ಯರ್ಥಿ ಇಲ್ಲ. ಒಬ್ಬರೇ ಅಭ್ಯರ್ಥಿ ಹಾಕಿದ್ದರೂ, ಇಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಿದೆ. ಒಂದೇ ವೇದಿಕೆ, ಒಂದೇ ಜನ. ಆದರೆ, ಎರಡು ಭಾಷಣ ಮಾಡಲಾಗುತ್ತಿದೆ. ಬಿಜೆಪಿ ಇಷ್ಟೊಂದು ದುರ್ಬಲವಾಗಿದೆ ಎಂದು ನಾನು ಭಾವಿಸಿರಲಿಲ್ಲ. ಪಕ್ಷ, ಸಿಎಂ, ಹೈಕಮಾಂಡ್ ಎಲ್ಲವೂ ಅಸಹಾಯಕ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ನೋಡೋಣ. ನಮಗೆ ಯಾರೂ ಎದುರಾಳಿಗಳಿಲ್ಲ. ನಮ್ಮ ಮತ ನಾವು ಹಾಕಿಸಿಕೊಂಡರೆ ಸಾಕು. ನಾವು ಒಳ್ಳೆಯ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಇಬ್ಬರು ಅಭ್ಯರ್ಥಿ ಇಳಿಸಿ ಎದುರಾಳಿ ಮಾಡಿಕೊಳ್ಳಬೇಕಿಲ್ಲ. ನಮ್ಮಲ್ಲಿ ಪಕ್ಷಕ್ಕೆ ಮೋಸ ಮಾಡುವವರು, ಬಂಡಾಯ ಅಭ್ಯರ್ಥಿ ಇಲ್ಲ' ಎಂದು ಸ್ಪಷ್ಟಪಡಿಸಿದರು.
‘ಕಾಂಗ್ರೆಸ್ ಅನ್ನು ಉಸಿರುಗಟ್ಟಿಸುತ್ತೇವೆ' ಎಂಬ ಬಿಎಸ್‍ವೈ ಹೇಳಿಕೆ ತಿರುಗೇಟು ನೀಡಿದ ಅವರು, ‘ಯಡಿಯೂರಪ್ಪ ಅವರಿಗಾದ ನೋವು, ದುಃಖ, ದುಮ್ಮಾನ, ಮಾನಸಿಕ ಹಿಂಸೆ, ರಾಜೀನಾಮೆ ಸೇರಿ ಎಲ್ಲವನ್ನು ಅವರು ತಮ್ಮ ಪಕ್ಷದ ಮೇಲೆ ದೂರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ಕೋಪ-ತಾಪ ಹೊರಗೆ ಹಾಕಲು ಪ್ರತಿಪಕ್ಷ ಬಳಸಿಕೊಳ್ಳುತ್ತಿದ್ದಾರೆ. ನಮ್ಮನ್ನು ಶಾಶ್ವತವಾಗಿ ವಿಪಕ್ಷದಲ್ಲೇ ಕೂರಿಸಲಿ. ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ನಾನ್ಯಾಕೆ ಮಾತನಾಡಲಿ' ಎಂದು ಟೀಕಿಸಿದರು.
ಒಮ್ಮತದ ಆಯ್ಕೆ: ರಮೇಶ್ ಜಾರಕಿಹೊಳಿ ಅವರು ಏನಾದರೂ ಹೇಳಿಕೊಳ್ಳಲಿ. ಇಲ್ಲಿ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಅಭ್ಯರ್ಥಿ ಅಲ್ಲ. ಕಾಂಗ್ರೆಸ್ ಪಕ್ಷವೇ ಅಭ್ಯರ್ಥಿ. ಎಲ್ಲ ಪಕ್ಷದಲ್ಲೂ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ. ಯುವಕರಿಗೆ ಅವಕಾಶ ಮಾಡಿಕೊಡಲಾಗಿದೆ. ನಮ್ಮಲ್ಲಿ ಎಲ್ಲರೂ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ' ಎಂದು ಶಿವಕುಮಾರ್, ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಿದ್ದನ್ನು ಸಮರ್ಥಿಸಿದರು.
ನೆರೆ ಪರಿಹಾರ ನೀಡಿಲ್ಲ ಎಂದು 40 ಮಂದಿ ಹೆಣ್ಣುಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ನಾನು ಅವರು ಕೊಟ್ಟ ದಾಖಲೆ ಇಟ್ಟುಕೊಂಡಿದ್ದು, ನೆರೆ ಬಂದ ಕಡೆ ಎಲ್ಲಿ ಮನೆ ಕಟ್ಟಿಕೊಟ್ಟಿದ್ದಾರೆ? ನಾವು ಜನರ ಕಷ್ಟಗಳಿಗೆ ಧ್ವನಿ ಆಗಬೇಕು, ಇಲ್ಲದಿದ್ದರೆ ನಮ್ಮ ಕರ್ತವ್ಯಕ್ಕೆ ಮೋಸ ಮಾಡಿದಂತೆ. ನೆರೆ ಅನಾಹುತ ಹಾಗೂ ಸರಕಾರದ ಪರಿಹಾರ ವಿಚಾರವಾಗಿ ದೊಡ್ಡ ಚರ್ಚೆ ನಡೆಸುವಂತೆ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಪಕ್ಷದ ಸಭೆಯಲ್ಲಿ ಸೂಚಿಸಿದ್ದೇವೆ ಎಂದರು.
ಇತ್ಯರ್ಥ ಮಾಡಲು ಅಡ್ಡಿ ಏನು: ಮಹದಾಯಿ ವಿಚಾರದಲ್ಲಿ ಕೆಲಸ ಮಾಡಲು ಏನು ಸಮಸ್ಯೆ? ನ್ಯಾಯಾಧಿಕರಣದ ತೀರ್ಪು ಬಂದ ನಂತರ ಗೋವಾದಿಂದ ಯಾವ ರಾಜಕಾರಣ? ನಮ್ಮ 28 ಸಂಸದರಿಗಿಂತ ಗೋವಾದ ಒಬ್ಬರು ಸಂಸದರು ಹೆಚ್ಚೇ? ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದವರು. ಅವರು ಏನಾದರೂ ಮಾಡುತ್ತಾರೆಂದು ಭಾವಿಸಿದ್ದೆ. ಆದರೆ ಅವರೇ ದುರ್ಬಲರಾಗಿದ್ದು, ಅವರ ಸಂಪುಟ ಸಚಿವರೇ ನಿರಾಣಿ ಅವರು ಸಿಎಂ ಆಗುತ್ತಾರೆ ಎಂದಿದ್ದಾರೆ. ಅದೇ ವೇದಿಕೆ ಮೇಲಿದ್ದವರು ಅಲ್ಲೇ ನಿಂತು ನಾನು ಬೊಮ್ಮಾಯಿ ಅವರ ಜತೆ ಕೆಲಸ ಮಾಡುತ್ತಿದ್ದೇನೆ, ಈ ರೀತಿ ಸೂಚಿಸುವುದು ಸಲ್ಲ ಎಂದು ಹೇಳಬೇಕಿತ್ತು. ಆದರೆ ಆಗ ಮಾತನಾಡದೇ, ಅನಂತರ ಹೇಳಿಕೆ ನೀಡುತ್ತಾರೆ. ಮುಖ್ಯಮಂತ್ರಿ ದುರ್ಬಲರಾಗಿದ್ದಾರೋ ಇಲ್ಲವೊ ಮಾಧ್ಯಮಗಳೇ ವಿಶ್ಲೇಷಣೆ ಮಾಡಲಿ' ಎಂದು ಹೇಳಿದರು.
ತನಿಖೆ ಮಾಡಲಿ: ಕಾಮಗಾರಿ ಗುತ್ತಿಗೆಯಲ್ಲಿ ಶೇ.40 ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಶೇ.10ರಷ್ಟು ಕಮಿಷನ್ ಸರಕಾರ ಎಂದು ಪ್ರಧಾನಿ ಆರೋಪ ಮಾಡಿದ್ದರು. ಆಗ ಯಾವುದೇ ತನಿಖೆ ಮಾಡಲಿಲ್ಲ. ಇದೀಗ 40 ಪರ್ಸೆಂಟ್ ಕಮಿಷನ್‍ನಲ್ಲಿ ಮಂತ್ರಿಗಳಿಗೆ ಎಷ್ಟು? ಸಂಸದರಿಗೆ ಎಷ್ಟು? ಎಂದೆಲ್ಲಾ ಪಟ್ಟಿ ನೀಡಲಾಗಿದೆ. 1 ಲಕ್ಷ ಗುತ್ತಿಗೆದಾರರು ಇರುವ ನೋಂದಾಯಿತ ಗುತ್ತಿಗೆದಾರರ ಸಂಘವೇ ಈ ದೂರು ನೀಡಿದೆ. ದೇಶದ ಅತ್ಯಂತ ಭ್ರಷ್ಟ ಸರಕಾರ ಈ ರಾಜ್ಯದಲ್ಲಿದೆ' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
ಅವರು ಶ್ರೀಮಂತರಲ್ಲವೇ?: ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳಿಲ್ಲ, ಹಾಗಾಗಿ ಹಣವಂತರನ್ನು ಕಣಕ್ಕಿಳಿಸಿ, ದುಡ್ಡಿನ ಆಟ ಆಡುತ್ತಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ನಾವು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಬಿಜೆಪಿ ಒಬ್ಬ ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ಈ ಸರಕಾರ ಜನರ ಸಂಕಷ್ಟ ಪರಿಹರಿಸಲು ಒಂದು ಕಾರ್ಯಕ್ರಮ ನೀಡಲು ಆಗಲಿಲ್ಲ. ಕೆಜಿಎಫ್ ಬಾಬು ಅವರಿಗೆ ಅವರದೇ ಆದ ವೈಯಕ್ತಿಕ ವ್ಯವಹಾರಗಳಿವೆ. ಆ ಬಗ್ಗೆ ಮಾತಾಡೋದು ಸರಿಯಲ್ಲ. ಬಿಜೆಪಿಯವರು ನಮ್ಮ ಪಕ್ಷದಲ್ಲಿದ್ದವರನ್ನು ಕರೆದುಕೊಂಡು ಹೋದರಲ್ಲಾ, ಅವರೆಲ್ಲಾ ಬಡವರೇ? ಅವರು ಶ್ರೀಮಂತರಲ್ಲವಾ? ಬಿಜೆಪಿಯವರು ಸುಮ್ಮನೆ ಮಾತನಾಡುತ್ತಾರೆ ಎಂದು ಟೀಕಿಸಿದರು.







