ಸುಧಾ ಭಾರದ್ವಾಜ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಶೀಘ್ರ ವಿಚಾರಣೆಗೆ ಸುಪ್ರೀಂಗೆ ಎನ್‌ಐಎ ಮನವಿ
ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವಕೀಲೆ, ಹೋರಾಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ನೀಡಿರುವ ಡೀಫಾಲ್ಟ್ ಜಾಮೀನನ್ನು ಪ್ರಶ್ನಿಸಿ ತಾನು ಸಲ್ಲಿಸಿರುವ ಅಪೀಲಿನ ತುರ್ತು ವಿಚಾರಣೆಗೆ ರಾಷ್ಟ್ರೀಯ ತನಿಖಾ ಏಜನ್ಸಿ ಸೋಮವಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ.
2018ರಿಂದ ಜೈಲಿನಲ್ಲಿದ್ದ ಸುಧಾ ಅವರಿಗೆ ಬಾಂಬೆ ಹೈಕೋರ್ಟ್ ಡಿಸೆಂಬರ್ 1ರಂದು ಡೀಫಾಲ್ಟ್ ಜಾಮೀನು ನೀಡಿತ್ತಲ್ಲದೆ ಜಾಮೀನಿನ ಷರತ್ತುಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲು ಆಕೆಗೆ ಡಿಸೆಂಬರ್ 8ರಂದು ವಿಶೇಷ ಎನ್‍ಐಎ ನ್ಯಾಯಾಲಯದ ಮುಂದೆ ಹೋಗಲು ಸೂಚಿಸಿತ್ತು.
ಆದರೆ ಎನ್‍ಐಎ ಡಿಸೆಂಬರ್ 3ರಂದೇ ಆಕೆಯ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಕದ ತಟ್ಟಿದೆ.
ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ಪ್ರಸ್ತಾಪಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಪೀಲಿನ ಶೀಘ್ರ ವಿಚಾರಣೆಗೆ ಕೋರಿದಾಗ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಪರೀಶೀಲಿಸುವುದಾಗಿ ತಿಳಿಸಿದರು.
ಆದರೆ ಪ್ರಕರಣದ ಇತರ ಎಂಟು ಆರೋಪಿಗಳಾದ ಸುಧೀರ್ ಧವಳೆ, ಡಾ ಪಿ ವರವರ ರಾವ್, ರೋನಾ ವಿಲ್ಸನ್, ವಕೀಲ ಸುರೇಂದ್ರ ಗದ್ಲಿಂಗ್, ಪ್ರೊಫೆಸರ್ ಶೋಮಾ ಸೇನ್, ಮಹೇಶ್ ರಾವತ್, ವೆರ್ನೊನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರಿಗೆ ಜಾಮೀನು ನಿರಾಕರಿಸಲಾಗಿದೆ.