ಸೇನಾಪಡೆಗಳ ವಿಶೇಷಾಧಿಕಾರಗಳ ಕಾಯ್ದೆ ಹಿಂಪಡೆಯಲು ಕೇಂದ್ರಕ್ಕೆ ನಾಗಾಲ್ಯಾಂಡ್, ಮೇಘಾಲಯ ಸಿಎಂಗಳ ಆಗ್ರಹ

ಹೊಸದಿಲ್ಲಿ: ಸೇನಾಪಡೆಗಳ ವಿಶೇಷಾಧಿಕಾರಗಳ ಕಾಯಿದೆಯನ್ನು ವಾಪಸ್ ಪಡೆಯಬೇಕೆಂದು ಇಂದು ಕೇಂದ್ರ ಸರಕಾರವನ್ನು ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫ್ಯು ರಿಯೋ ಮತ್ತು ಮೇಘಾಲಯ ಮುಖ್ಯಮಂತ್ರಿ ಕೊನಾರ್ಡ್ ಸಂಗ್ಮ ಆಗ್ರಹಿಸಿದ್ದಾರೆ.
ನಾಗಾಲ್ಯಾಂಡ್‍ನ ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಶನಿವಾರ ಮತ್ತು ರವಿವಾರ ಪ್ರತ್ಯೇಕ ಘಟನೆಗಳಲ್ಲಿ 14 ನಾಗರಿಕರು ಸಾವಿಗೀಡಾದ ಘಟನೆಯ ಬೆನ್ನಲ್ಲಿ ಈ ಬೇಡಿಕೆ ಬಂದಿದೆ.
ನಾಗಾಲ್ಯಾಂಡ್ ಮತ್ತು ನಾಗಾ ಜನರು ಯಾವತ್ತೂ ಸೇನಾಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ವಿರೋಧಿಸಿದ್ದಾರೆ, ಅದನ್ನು ವಾಪಸ್ ಪಡೆಯಬೇಕು ಎಂದು ರಿಯೋ ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಈ ಕಾಯಿದೆಯು ದೇಶಕ್ಕೊಂದು ಕಪ್ಪು ಚುಕ್ಕೆ ಎಂದು ಅವರು ಬಣ್ಣಿಸಿದ್ದಾರೆ. ಸಂಗ್ಮಾ ಕೂಡ ಇದೇ ಬೇಡಿಕೆ ಮುಂದಿಟ್ಟು ಟ್ವೀಟ್ ಮಾಡಿದ್ದಾರೆ.
ರಿಯೋ ಅವರ ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ ಮತ್ತು ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಎರಡೂ ಬಿಜೆಪಿಯ ಮಿತ್ರಪಕ್ಷಗಳಾಗಿವೆ.
Next Story