ನಾಗಾಲ್ಯಾಂಡ್ ನಾಗರಿಕರ ಹತ್ಯೆ ‘ಯುದ್ಧಾಪರಾಧ'ಕ್ಕೆ ಸಮ ಎಂದ ರಾಜ್ಯ ಬಿಜೆಪಿ ಘಟಕ

Photo: Twitter/@AlongImna
ಹೊಸದಿಲ್ಲಿ : ರಾಜ್ಯದ ಮೋನ್ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಗಳನ್ನು 'ಹತ್ಯಾಕಾಂಡ' ಎಂದು ಬಣ್ಣಿಸಿರುವ ಬಿಜೆಪಿ ನಾಗಾಲ್ಯಾಂಡ್ ಘಟಕ ಇದೊಂದು 'ಯುದ್ಧಾಪರಾಧ' ಹಾಗೂ 'ಜನಾಂಗೀಯ ಹತ್ಯೆ' ಗೆ ಸಮನಾಗಿದೆ ಎಂದಿದೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್ಎಸ್ಪಿಎ) ಹಿಂಪಡೆಯಬೇಕೆಂದೂ ಕರೆ ನೀಡಿದೆ.
ಶನಿವಾರ, ಎನ್ಎಸ್ಸಿಎನ್ (ಕೆ) ಉಗ್ರಗಾಮಿಗಳ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಸೇನೆ ಹಾಗೂ ಅಸ್ಸಾಂ ರೈಫಲ್ಸ್ನ ಭದ್ರತಾ ಸಿಬ್ಬಂದಿಯು ಆರು ನಾಗರಿಕರನ್ನು ಗುಂಡಿಕ್ಕಿ ಕೊಂದಿದ್ದರು. ಅದೇ ದಿನ ಸಂಜೆ ಒಂದು ಜನಸಮೂಹವು ಸೇನಾ ಪಡೆಗಳ ಮೇಲೆ ದಾಳಿ ಮಾಡಿತು. ಇದರ ಪರಿಣಾಮವಾಗಿ ಒಬ್ಬ ಸೈನಿಕ ಹಾಗೂ ಕನಿಷ್ಠ ಏಳು ನಾಗರಿಕರು ಭದ್ರತಾ ಸಿಬ್ಬಂದಿಯಿಂದ "ಕೌಂಟರ್ ಫೈರ್" ನಲ್ಲಿ ಕೊಲ್ಲಲ್ಪಟ್ಟರು. ಮರುದಿನ, ಡಿಸೆಂಬರ್ 5 ರಂದು ಇನ್ನೊಬ್ಬ ನಾಗರಿಕನನ್ನು ಕೊಲ್ಲಲಾಯಿತು.
ಸೋಮವಾರ The Print ಜೊತೆಗೆ ಮಾತನಾಡಿದ ನಾಗಾಲ್ಯಾಂಡ್ ಬಿಜೆಪಿ ಅಧ್ಯಕ್ಷ ಹಾಗೂ ಬುಡಕಟ್ಟು ವ್ಯವಹಾರಗಳ ರಾಜ್ಯದ ಸಚಿವರೂ ಆಗಿರುವ ತೆಮ್ಜೆನ್ ಇಮ್ನಾ ಅಲೋಂಗ್ "14 ನಾಗರಿಕರ ಹತ್ಯಾಕಾಂಡಕ್ಕೆ ಯಾವುದೇ ಸಮರ್ಥನೆ ಇಲ್ಲ'' ಎಂದು ಹೇಳಿದರು.
ನಾಗಾಲ್ಯಾಂಡ್ನಲ್ಲಿ ಬಿಜೆಪಿ 12 ಶಾಸಕರನ್ನು ಹೊಂದಿದೆ ಹಾಗೂ 60 ಸದಸ್ಯ ಬಲದ ವಿಧಾನಸಭೆಯಲ್ಲಿ 34 ಶಾಸಕರನ್ನು ಹೊಂದಿರುವ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್ಡಿಪಿಪಿ)ಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರದ ಭಾಗವಾಗಿದೆ.