ಉಡುಪಿ: ಇಬ್ಬರಲ್ಲಿ ಮಾತ್ರ ಕೋವಿಡ್ ಸೋಂಕು ಪತ್ತೆ
ಉಡುಪಿ, ಡಿ.6: ಜಿಲ್ಲೆಯಲ್ಲಿ ಇಂದು ಕೇವಲ ಇಬ್ಬರು ಮಾತ್ರ ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ಐವರು ಕೋವಿಡ್ನಿಂದ ಚೇತರಿಸಿಕೊಂಡಿದ್ದರೆ, ಒಟ್ಟು 75 ಮಂದಿ ಇನ್ನೂ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಇಬ್ಬರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಒಬ್ಬರು ಉಡುಪಿಯವರಾದರೆ, ಇನ್ನೊಬ್ಬರು ಕಾರ್ಕಳ ತಾಲೂಕಿನವರು. ಪಾಸಿಟಿವ್ ಬಂದ ಒಬ್ಬರನ್ನು ಕೋವಿಡ್ ಕೇರ್ ಸೆಂಟರ್ಗೆ ಹಾಗೂ ಇನ್ನೊಬ್ಬರನ್ನು ಅವರ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿವಾರ ಸೋಂಕಿನಿಂದ ಐವರು ಗುಣಮುಖರಾಗಿದ್ದು, ಈವರೆಗೆ ಕೊರೋನ ದಿಂದ ಚೇತರಿಸಿಕೊಂಡವರ ಸಂಖ್ಯೆ 76,386ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2968 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,938ಕ್ಕೇರಿದೆ.
9564 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 9564 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 1694 ಮಂದಿ ಮೊದಲ ಡೋಸ್ ಹಾಗೂ 7870 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 1055 ಮಂದಿ ಮೊದಲ ಡೋಸ್ ಹಾಗೂ 5588 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 638 ಮಂದಿ ಮೊದಲ ಡೋಸ್ ಹಾಗೂ 2273 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ ಐವರು ಆರೋಗ್ಯ ಕಾರ್ಯಕರ್ತರು ಹಾಗೂ ಐವರು ಮುಂಚೂಣಿ ಕಾರ್ಯಕರ್ತರು ಸಹ ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.