ಮರ್ಯಾದೆ ಹತ್ಯೆ: ತಾಯಿಯ ನೆರವಿನಿಂದ ಗರ್ಭಿಣಿ ಸಹೋದರಿಯ ಶಿರಚ್ಛೇದಗೈದ ಹದಿಹರೆಯದ ಯುವಕ

ಮುಂಬೈ ಡಿ. 6: ಹದಿಹರೆಯದ ಯುವಕನೋರ್ವ ತನ್ನ ತಾಯಿಯ ನೆರವಿನಿಂದ 19 ವರ್ಷದ ಸಹೋದರಿಯ ಶಿರಚ್ಛೇದನಗೈದ ಹಾಗೂ ಅದನ್ನು ನೆರೆ ಹೊರೆಯವರ ಮುಂದೆ ಪ್ರದರ್ಶಿಸಿದ ಮರ್ಯಾದೆ ಹತ್ಯೆ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ರವಿವಾರ ಸಂಭವಿಸಿದೆ ಕತ್ತರಿಸಿದ ತಲೆಯೊಂದಿಗೆ ಹದಿಹರೆಯದ ಯುವಕ ಹಾಗೂ ಆತನ ತಾಯಿ ಸೆಲ್ಫಿ ತೆಗೆದುಕೊಂಡ ಪ್ರತಿಪಾದನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ನಡೆಯುವಾಗ ಯುವತಿಯ ಪತಿ ಮನೆಯಲ್ಲಿ ಇದ್ದರು. ಅವರ ಮೇಲೆ ಕೂಡ ಯುವಕ ಕತ್ತಿಯಿಂದ ದಾಳಿ ನಡೆಸಲು ಪ್ರಯತ್ನಿಸಿದ್ದಾನೆ. ಆದರೆ, ಅವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಸಂಕೇತ್ ಸಂಜಯ್ ಮೊಟೆ ಹಾಗೂ ಆತನ ತಾಯಿ ಶೋಭಾ ಸಂಜಯ್ ಮೊಟೆ ಎಂದು ಗುರುತಿಸಲಾಗಿದೆ. ಗರ್ಭಿಣಿಯಾಗಿದ್ದ ತನ್ನ ಸಹೋದರಿಯನ್ನು ಹತ್ಯೆಗೈದ ಬಳಿಕ ಸಂಕೇತ್ ಸಂಜಯ್ ಆಕೆಯ ತಲೆ ಕತ್ತರಿಸಿ ಹಿಡಿದುಕೊಂಡು ಹೊರಗೆ ಬಂದಿದ್ದಾನೆ. ಅಲ್ಲದೆ, ಅದನ್ನು ಎಲ್ಲರೂ ನೋಡುವಂತೆ ಗಾಳಿಯಲ್ಲಿ ಬೀಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಯುವತಿ ಕೀರ್ತಿ ತೊರೆ ಜೂನ್ ನಲ್ಲಿ ಓಡಿಹೋಗಿದ್ದಳು ಹಾಗೂ ಪತಿಯೊಂದಿಗೆ ಜೀವಿಸುತ್ತಿದ್ದಳು. ತಾಯಿ ಶೋಭಾ ಸಂಜಯ್ ಪುತ್ರಿಯನ್ನು ಕಳೆದ ವಾರ ಸಂಪರ್ಕಿಸಿದ್ದರು ಹಾಗೂ ಮನೆಗೆ ಬರಬಹುದೇ ಎಂದು ಕೇಳಿದ್ದರು. ಅನುಮತಿ ಪಡೆದ ಬಳಿಕ ಪುತ್ರನೊಂದಿಗೆ ಪುತ್ರಿಯ ಮನೆಗೆ ರವಿವಾರ ಆಗಮಿಸಿದ್ದಳು.
ಅವರಿಬ್ಬರು ಪುತ್ರಿಯ ಮನೆಗೆ ಆಗಮಿಸಿದ ಸಂದರ್ಭ ಆಕೆಯ ಪತಿ ಇನ್ನೊಂದು ಕೊಠಡಿಯಲ್ಲಿ ಇದ್ದ. ಯುವತಿ ತನ್ನ ತಾಯಿ ಹಾಗೂ ಸಹೋದರನಿಗೆ ಚಹಾ ಮಾಡಲು ತೆರಳಿದಳು. ಈ ಸಂದರ್ಭ ಇಬ್ಬರೂ ಆಕೆಯ ಮೇಲೆ ಎರಗಿದ್ದಾರೆ. ತಾಯಿ ಶೋಭಾ ಸಂಜಯ್ ಆಕೆಯ ಕಾಲುಗಳನ್ನು ಹಿಡಿದುಕೊಂಡ ಸಂದರ್ಭ, ಸಹೋದರ ಸಂಕೇತ್ ಸಂಜಯ್ ಕತ್ತಿಯಿಂದ ಆಕೆಯ ತಲೆ ಕತ್ತರಿಸಿದ್ದಾನೆ. ಅಲ್ಲದೆ, ತಲೆಯನ್ನು ಹೊರಗೆ ಕೊಂಡೊಯ್ದು ನೆರೆ ಹೊರೆಯವರ ಮುಂದೆ ಪ್ರದರ್ಶಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಿರ್ಗಾಂವ್ ಪೊಲೀಸ್ ಠಾಣೆಯಲ್ಲಿ ಶರಣಾಗತರಾಗಿದ್ದಾರೆ. ಅವರನ್ನು ಈಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.