ಕೇರಳ: ಬಿಜೆಪಿ ಕಾರ್ಯಕರ್ತನ ಕಿರುಕುಳದಿಂದ ಬೇಸತ್ತ ಮಹಿಳೆ ಮತ್ತು ಪುತ್ರ ಬೆಂಕಿ ಹಚ್ಚಿಕೊಂಡು ಸಾವು

ಸಾಂದರ್ಭಿಕ ಚಿತ್ರ (source: PTI)
ಕೊಚ್ಚಿ,ಡಿ.6: ಬಿಜೆಪಿ ಕಾರ್ಯಕರ್ತನಿಂದ ನಿರಂತರ ಕಿರುಕುಳಕ್ಕೊಳಗಾಗಿದ್ದ ಮಹಿಳೆ ಮತ್ತು ಆಕೆಯ ಹದಿಹರೆಯದ ಪುತ್ರ ತೀವ್ರ ಸುಟ್ಟ ಗಾಯಗಳಿಂದ ನಿಗೂಢ ಸನ್ನಿವೇಶದಲ್ಲಿ ಸಾವನ್ನಪ್ಪಿದ ಘಟನೆ ರವಿವಾರ ಎರ್ನಾಕುಲಂ ಜಿಲ್ಲೆಯ ವೈಪೀನ ದ್ವೀಪದ ನಯರಂಬಾಳಮ್ನಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಸಿಂಧು (42) ಮತ್ತು ಪುತ್ರ ಅತುಲ್ (17) ಎಂದು ಗುರುತಿಸಲಾಗಿದೆ. ಸಿಂಧುರ ಪತಿ ಸಾಜು ಈ ಹಿಂದೆಯೇ ನಿಧನರಾಗಿದ್ದಾರೆ. ಸಿಂಧು ರವಿವಾರ ಸಂಜೆ ತನ್ನ ಮನೆಯನ್ನು ಒಳಗಿನಿಂದ ಭದ್ರಪಡಿಸಿಕೊಂಡು,ಮಗನೊಂದಿಗೆ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮನೆಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಕರೆಯವರು ಬಾಗಿಲು ಒಡೆದು ಒಳಪ್ರವೇಶಿಸಿ,ತೀವ್ರ ಸುಟ್ಟ ಗಾಯಗಳಾಗಿದ್ದ ತಾಯಿ-ಮಗನನ್ನು ಎರ್ನಾಕುಲಮ್ನ ಲೂರ್ಡ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅದೇ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ ಸಿಂಧು ಕೆಲ ಸಮಯದ ಬಳಿಕ ಮೃತಪಟ್ಟಿದ್ದರೆ ಅತುಲ್ ಸೋಮವಾರ ಕೊನೆಯುಸಿರೆಳೆದಿದ್ದಾನೆ.
ನೆರೆಮನೆಯ ನಿವಾಸಿಯಾಗಿರುವ ಬಿಜೆಪಿ ಕಾರ್ಯಕರ್ತ ಪಿ.ಟಿ.ದಿಲೀಪ್ ಸಿಂಧುಗೆ ನಿರಂತರ ಕಿರುಕುಳವನ್ನು ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಿಂಧು ಸೋದರ ಜೋಜೊನನ್ನೂ ದಿಲೀಪ್ ಥಳಿಸಿದ್ದ ಎನ್ನಲಾಗಿದೆ.
ಆ್ಯಂಬುಲನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ತಮ್ಮ ಸಾವಿಗೆ ದಿಲೀಪ್ ಕಾರಣ ಎಂದು ಸಿಂಧು ಹೇಳಿದ್ದರು ಎಂದು ಆಕೆಯ ಕುಟುಂಬವು ತಿಳಿಸಿದೆ. ದಿಲೀಪ್ ತನ್ನನ್ನು ಚುಡಾಯಿಸುತ್ತಾನೆ ಎಂದು ಸಿಂಧು ಕೆಲವು ದಿನಗಳ ಹಿಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.ಆದರೆ ದಿಲೀಪ್ ವಿರುದ್ಧ ಜಾಮೀನು ಲಭ್ಯವಿರುವ ಕಲಮ್ನಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆತನಿಗೆ ಠಾಣೆಯಲ್ಲಿಯೇ ಜಾಮೀನು ನೀಡಿ ಕಳುಹಿಸಿದ್ದರು.
ಈ ನಡುವೆ ಇದು ಆತ್ಮಹತ್ಯೆಯಲ್ಲ,ಕೊಲೆ ಎಂದು ಸಂಬಂಧಿಗಳು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ದಿಲೀಪ್ ಹೆಸರನ್ನು ಸಿಂಧು ಹೇಳಿದ್ದ ಆಡಿಯೊ ಕ್ಲಿಪ್ ಅನ್ನು ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ.