ಠಾಣೆಯಲ್ಲಿ ವಿಚಾರಣೆಗೊಳಗಾಗಿದ್ದ ಯುವಕ ಬಳಿಕ ಮನೆಯಲ್ಲಿ ಸಾವು: ಚಿತ್ರಹಿಂಸೆ ಆರೋಪ

ರಾಮನಾಥಪುರಂ(ತ.ನಾ),ಡಿ.6: ಕೀಳತ್ತೂವುಲ್ ಪೊಲೀಸ್ ಠಾಣೆಯಲ್ಲಿ ಶನಿವಾರ ವಿಚಾರಣೆಗೊಳಗಾಗಿದ್ದ 20ರ ಹರೆಯದ ಕಾಲೇಜು ವಿದ್ಯಾರ್ಥಿಯೋರ್ವ ರವಿವಾರ ನಸುಕಿನಲ್ಲಿ ತನ್ನ ಮನೆಯಲ್ಲಿ ನಿಗೂಢ ಸಾವನ್ನಪ್ಪಿದ್ದಾನೆ.
ಮೃತನನ್ನು ನೀರಕೋಝಿನೆಂದಲ್ ಗ್ರಾಮದ ನಿವಾಸಿ ಎಲ್.ಮಣಿಕಂಡನ್ ಎಂದು ಗುರುತಿಸಲಾಗಿದ್ದು,ಆತ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ಶನಿವಾರ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಿದ್ದ ಮಣಿಕಂಡನ್ ಮತ್ತು ಆತನ ಸ್ನೇಹಿತರನ್ನು ತಡೆದಿದ್ದರು. ಸ್ನೇಹಿತರು ತಮ್ಮ ಬೈಕ್‌ಗಳನ್ನು ನಿಲ್ಲಿಸಿದ್ದರಾದರೂ ಮಣಿಕಂದನ್ ಮುಂದಕ್ಕೆ ಸಾಗಿದ್ದ ಎಂದು ಬಲ್ಲ ಮೂಲಗಳು ತಿಳಿಸಿವೆ.
ಮಣಿಕಂದನ್‌ನನ್ನು ಬೆನ್ನಟಿದ್ದ ಪೊಲೀಸರು ಆತನ್ನು ಹಿಡಿದು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದರು. ವಿಚಾರಣೆಯ ಬಳಿಕ ಪೊಲೀಸರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದು,ತಾಯಿ ಮತ್ತು ತಮ್ಮ ಠಾಣೆಗೆ ಆಗಮಿಸಿ ಆತನನ್ನು ಮನೆಗೆ ಕರೆದೊಯ್ದಿದ್ದರು.
ಮನೆಗೆ ಮರಳಿದ ಕೆಲವೇ ಗಂಟೆಗಳಲ್ಲಿ ನಸುಕಿನ 3:30ರ ಸುಮಾರಿಗೆ ಮಣಿಕಂದನ್ ನಿಗೂಢ ಸ್ಥಿತಿಯಲ್ಲಿ ಮೃತಪಟ್ಟಿದ್ದು,ಆತನ ಬಾಯಿಯಿಂದ ನೊರೆ ಬರುತ್ತಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮುಡುಕುಲತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ಮಣಿಕಂದನ್ ಸಾವಿಗೆ ಪೊಲೀಸರ ಹಿಂಸೆ ಕಾರಣವೆಂದು ಆರೋಪಿಸಿ ಸಂಬಂಧಿಗಳು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿ ಸೂಕ್ತ ತನಿಖೆ ಮತ್ತು ಪರಿಹಾರಕ್ಕೆ ಆಗ್ರಹಿಸಿದ್ದರು.
ಪೊಲೀಸರೊಂದಿಗೆ ಮಾತುಕತೆಯ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಂಡ ಕುಟುಂಬ ಸದಸ್ಯರು ಶವವನ್ನು ಸ್ವೀಕರಿಸಿದರು. ಮಣಿಕಂದನ್ ಹಾವು ಕಡಿತದಿಂದ ಮೃತನಾಗಿರಬಹುದು ಎಂದು ಸ್ಥಳೀಯ ಪೊಲೀಸರು ಹೇಳಿದ್ದರು.
ಮಣಿಕಂದನ್ ನನ್ನು ಕೇವಲ ಪ್ರಶ್ನಿಸಲಾಗಿತ್ತು ಮತ್ತು ಮನೆಯವರು ಆರೋಪಿಸಿದಂತೆ ಆತನಿಗೆ ಹಿಂಸೆ ನೀಡಿರಲಿಲ್ಲ ಎನ್ನುವುದನ್ನು ಪೊಲೀಸ್ ಠಾಣೆಯ ಸಿಸಿಟಿವಿ ಫೂಟೇಜ್ ತೋರಿಸಿದೆ ಎಂದು ಎಸ್ಪಿ ಇ.ಕಾರ್ತಿಕ್ ತಿಳಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಬಾಹ್ಯ ಗಾಯಗಳು ಅಥವಾ ಹಾವು ಕಡಿತದ ಗಾಯಗಳು ಕಂಡು ಬಂದಿಲ್ಲ. ವಿಸೆರಾ ವಿಶ್ಲೇಷಣೆಯ ಬಳಿಕವೇ ಸಾವಿನ ಕಾರಣ ಗೊತ್ತಾಗಬೇಕಿದೆ ಎಂದರು.