ಒಮೈಕ್ರಾನ್ ಭೀತಿ:ಕೇಂದ್ರ ಸರಕಾರಕ್ಕೆ 3 ಸಲಹೆಗಳನ್ನು ನೀಡಿದ ಆದಿತ್ಯ ಠಾಕ್ರೆ
ಮುಂಬೈ: ಹೆಚ್ಚುತ್ತಿರುವ ಓಮೈಕ್ರಾನ್ ಭೀತಿಯನ್ನು ಉಲ್ಲೇಖಿಸಿ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಅವರು ಬೂಸ್ಟರ್ ಲಸಿಕೆಗಳನ್ನು ಅನುಮತಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಲಸಿಕೆ ಅಂತರವನ್ನು ಕಡಿಮೆ ಮಾಡಿ ಹಾಗೂ ಚುಚ್ಚುಮದ್ದಿನ ಕನಿಷ್ಠ ವಯಸ್ಸನ್ನು 15 ಕ್ಕೆ ಇಳಿಸಿ ಎಂದು ಸಲಹೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಬರೆದ ಪತ್ರದಲ್ಲಿ, ಆದಿತ್ಯ ಠಾಕ್ರೆ ಅವರು ಹೊಸ ಕೋವಿಡ್ ರೂಪಾಂತರಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ವೈದ್ಯರೊಂದಿಗಿನ ಅವರ ಸಂವಾದವನ್ನು ಉಲ್ಲೇಖಿಸಿ ಮೂರು ಸಲಹೆಗಳನ್ನು ಪಟ್ಟಿ ಮಾಡಿದ್ದಾರೆ.
ವರ್ಷದ ಆರಂಭದಲ್ಲಿ ಲಸಿಕೆಗಳನ್ನು ಪ್ರಾರಂಭಿಸಿದಾಗ ಕೋವಿಡ್ ವಿರುದ್ದ ಲಸಿಕೆಗಳನ್ನು ಸ್ವೀಕರಿಸಿದ್ದ ಎಲ್ಲಾ ಮುಂಚೂಣಿಯ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರ ಮೂರನೇ ಬೂಸ್ಟರ್ ಲಸಿಕೆಗೆ ಅನುಮತಿಸಬೇಕು ಎಂದು ಠಾಕ್ರೆ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
"ವ್ಯಾಕ್ಸಿನೇಷನ್‌ಗೆ ಕನಿಷ್ಠ ವಯಸ್ಸನ್ನು 15 ಕ್ಕೆ ಕಡಿಮೆ ಮಾಡುವುದರಿಂದ ಮಾಧ್ಯಮಿಕ ಶಾಲೆಗಳು ಹಾಗೂ ಜೂನಿಯರ್ ಕಾಲೇಜುಗಳನ್ನು ಲಸಿಕೆ ರಕ್ಷಣೆಯೊಂದಿಗೆ ಒಳಗೊಳ್ಳಲು ನಮಗೆ ಸಾಧ್ಯವಾಗುತ್ತದೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.