ತಮ್ಮ ವಿರುದ್ಧದ ದ್ವೇಷದ ಪೋಸ್ಟ್ ತೆಗೆದುಹಾಕದ ಫೇಸ್ಬುಕ್ ವಿರುದ್ಧ ನ್ಯಾಯಾಲಯದ ಮೊರೆ ಹೋದ ರೋಹಿಂಗ್ಯ ನಿರಾಶ್ರಿತರು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ತಮ್ಮ ವಿರುದ್ಧದ ದ್ವೇಷಕಾರಕ ಪೋಸ್ಟ್ ವಿರುದ್ಧ ಫೇಸ್ಬುಕ್ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಹಲವಾರು ರೋಹಿಂಗ್ಯ ನಿರಾಶ್ರಿತರು ಫೇಸ್ಬುಕ್ ಅನ್ನು ನ್ಯಾಯಾಯಲಯಕ್ಕೆ ಎಳೆದಿದ್ದಾರಲ್ಲದೆ 150 ಬಿಲಿಯನ್ ಡಾಲರ್ ಪರಿಹಾರಕ್ಕೂ ಬೇಡಿಕೆಯಿರಿಸಿದ್ದಾರೆ. ದ್ವೇಷದ ಪೋಸ್ಟ್ ತೆಗೆದುಹಾಕದೇ ಇದ್ದುದರಿಂದ ತಮ್ಮ ಸಮುದಾಯದ ಮಂದಿ ಹಿಂಸೆಯನ್ನು ಎದುರಿಸುವಂತಾಯಿತು, ಎಂದು ನಿರಾಶ್ರಿತರು ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಫೇಸ್ಬುಕ್ ವಿರುದ್ಧ ಸೋಮವಾರ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಕಾನೂನು ಸಂಸ್ಥೆಗಳಾದ ಎಡೆಲ್ಸನ್ ಪಿಸಿ ಹಾಗೂ ಫೀಲ್ಡ್ಸ್ ಪಿಎಲ್ಎಲ್ಸಿ ದಾಖಲಿಸಿವೆ. ಸಂಘಟನಾತ್ಮಕ ಕ್ರಮವೊಂದರಲ್ಲಿ ಬ್ರಿಟಿಷ್ ವಕೀಲರು ಕೂಡ ಫೇಸ್ಬುಕ್ ಸಂಸ್ಥೆಯ ಲಂಡನ್ ಕಚೇರಿಗೆ ನೋಟಿಸ್ ಕಳುಹಿಸಿದ್ದಾರೆ.
ದ್ವೇಷಕಾರಕ ಪೋಸ್ಟ್ ಗಳು ಹೆಚ್ಚಿನ ಹಾನಿ ಉಂಟುಮಾಡಬಹುದಾದ ದೇಶಗಳಲ್ಲಿ ಇಂತಹ ವಿಷಯಗಳ ವಿರುದ್ಧ ಕಂಪೆನಿ ಕ್ರಮಕೈಗೊಳ್ಳುತ್ತಿಲ್ಲ ಎಂಬ ಕುರಿತು ಫೇಸ್ಬುಕ್ ವಿಸಲ್ಬ್ಲೋವರ್ ಫ್ರಾನ್ಸಿಸ್ ಹೌಗೆನ್ ಅವರ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮ್ಯಾನ್ಮಾರ್ನ ಮಿಲಿಟರಿಯು ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಳಸಿ 'ಮಾಹಿತಿ ಯುದ್ಧ' ನಡೆಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.