ಸುಂಟಿಕೊಪ್ಪ: ಶಾಲೆಯ ನೀರಿನ ಟ್ಯಾಂಕ್ ಗೆ ವಿಷಕಾರಿ ರಾಸಾಯನಿಕ ಬೆರೆಸಿದ ದುಷ್ಕರ್ಮಿಗಳು
ಮಡಿಕೇರಿ: ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯ ನೀರಿನ ಟ್ಯಾಂಕ್ ಗೆ ವಿಷಕಾರಿ ರಾಸಾಯನಿಕ ಬೆರೆಸಿದ ಪ್ರಕರಣ ಪತ್ತೆಯಾಗಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಅನಾಹುತದಿಂದ ಪಾರಾಗಿದ್ದಾರೆ.
ಶೌಚಾಲಯಕ್ಕೆ ಹೋಗಿದ್ದ ವಿದ್ಯಾರ್ಥಿಗಳಿಗೆ ನೀರು ದುರ್ವಾಸನೆ ಬರುತ್ತಿರುವುದು ಗೊತ್ತಾಗಿದೆ. ವಿಷಯ ತಿಳಿದ ಶಿಕ್ಷಕರು ತಕ್ಷಣ ಎಚ್ಚೆತ್ತುಕೊಂಡು ಟ್ಯಾಂಕನ್ನು ಪರಿಶೀಲಿಸಿದಾಗ ಮುಚ್ಚಳ ತೆಗೆದಿರುವುದು ಮತ್ತು ರಾಸಾಯನಿಕ ಮಿಶ್ರಣವಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಶಿಕ್ಷಕರ ದೂರಿನ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ, ಪಿಡಿಓ ವೇಣುಗೋಪಾಲ್, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ಸದಸ್ಯರುಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪರೀಕ್ಷೆಗಾಗಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಯಿತು. ನಂತರ ನೀರಿನಲ್ಲಿ ವಿಷಕಾರಿ ರಾಸಾಯನಿಕ ಬೆರೆತಿರುವುದು ಖಾತ್ರಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಪ್ಪಿದ ಅನಾಹುತ
ಶಾಲೆಯ ಟ್ಯಾಂಕ್ ನ ನೀರನ್ನು ಶೌಚಾಲಯಕ್ಕೆ ಮಾತ್ರ ಬಳಸಲಾಗುತ್ತಿತ್ತು. ಅಕ್ಷರ ದಾಸೋಹಕ್ಕಾಗಿ ಪಕ್ಕದಲ್ಲೇ ಇದ್ದ ಗ್ರಾ.ಪಂ ಯ ಬೃಹತ್ ಟ್ಯಾಂಕ್ ನ ನೀರಿನಿಂದ ಅಡುಗೆ ಮಾಡಲಾಗುತ್ತಿತ್ತು. ಈ ಕಾರಣದಿಂದ ದೊಡ್ಡ ಅನಾಹುತವೊಂದು ತಪ್ಪಿದಂತ್ತಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಗ್ರಾ.ಪಂ ಹಾಗೂ ಪೊಲೀಸ್ ಇಲಾಖೆ ಶಾಲೆಗಳ ಆವರಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಸುಂಟಿಕೊಪ್ಪದ ವಿವಿಧೆಡೆ ಗಾಂಜಾ ಸೇರಿದಂತೆ ಮಾದಕ ವ್ಯಸನಿಗಳ ಹಾವಳಿ ಮಿತಿ ಮೀರಿದ್ದು, ಗಾಂಜಾ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ. ಈ ಹಿಂದೆ ಶಾಲಾ ಕೊಠಡಿಯಲ್ಲಿದ್ದ ಪುಸ್ತಕಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶ ಮಾಡಿದ ಘಟನೆಯೂ ನಡೆದಿತ್ತು. ಆದರೂ ಪೊಲೀಸರು ಎಚ್ಚೆತ್ತುಕೊಂಡಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.