ಮೃತ ರೈತರ ಕುಟುಂಬಗಳಿಗೆ ಪರಿಹಾರಕ್ಕಾಗಿ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಆಗ್ರಹ
ಹೊಸದಿಲ್ಲಿ,ಡಿ.7: ಪ್ರಧಾನಿ ನರೇಂದ್ರ ಮೋದಿಯವರು ಭರವಸೆ ನೀಡಿರುವಂತೆ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ಪರಿಹಾರವನ್ನು ವಿತರಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಲೋಕಸಭೆಯಲ್ಲಿ ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು,ಪ್ರತಿಭಟನೆ ಸಂದರ್ಭದಲ್ಲಿ ರೈತರ ಸಾವುಗಳ ಬಗ್ಗೆ ದತ್ತಾಂಶ ನಿರ್ವಹಣೆಯ ಅಸಾಮರ್ಥ್ಯಕ್ಕಾಗಿ ಮೋದಿ ಸರಕಾರವನ್ನು ಟೀಕಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟ ಪಂಜಾಬ್ ಮತ್ತು ಹರ್ಯಾಣಗಳ ರೈತರ ಪಟ್ಟಿಯೊಂದನ್ನು ಸದನದಲ್ಲಿ ಮಂಡಿಸಿದ ಅವರು,700 ರೈತರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ರೈತರ ಸಾವುಗಳ ಕುರಿತು ಸರಕಾರದ ಬಳಿ ಯಾವುದೇ ದತ್ತಾಂಶಗಳಿಲ್ಲ ಎಂದು ಕೃಷಿ ಸಚಿವರು ಲೋಕಸಭೆಯಲ್ಲಿ ನ.30ರಂದು ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ತಿಳಿಸಿದ್ದರು ಎಂದು ರಾಹುಲ್ ಹೇಳಿದರು.
ಪಂಜಾಬ್ ಸರಕಾರವು 400 ಕುಟುಂಬಗಳಿಗೆ ತಲಾ ಐದು ಲ.ರೂ.ಪರಿಹಾರವನ್ನು ವಿತರಿಸಿದೆ ಮತ್ತು 152 ಜನರಿಗೆ ಸರಕಾರಿ ಉದ್ಯೋಗಗಳನ್ನು ನೀಡಿದೆ ಎಂದರು.
ಈ ವಿಷಯದಲ್ಲಿ ಸರಕಾರದಿಂದ ಹೇಳಿಕೆಗಾಗಿ ಆಗ್ರಹಿಸಿದ ಕಾಂಗ್ರೆಸ್ ಸದಸ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಎನ್‌ಸಿಪಿ ಮತ್ತು ಡಿಎಂಕೆ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.