ಇಂದು ಪ್ರತಿಭಟನೆ ವಾಪಾಸು ಪಡೆಯುವ ಬಗ್ಗೆ ನಿರ್ಧಾರ : ರೈತಮುಖಂಡರು

ಹೊಸದಿಲ್ಲಿ: ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಕಡಿಮೆಯಾಗುವ ಸುಳಿವು ಸಿಕ್ಕಿದ್ದು, ಪ್ರತಿಭಟನಾ ನಿರತ ರೈತರ ಆರು ಬೇಡಿಕೆಗಳ ಪೈಕಿ ಐದನ್ನು ಈಡೇರಿಸುವ ಕರಡು ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ. ದೆಹಲಿ ಗಡಿಯ ಪ್ರಮುಖ ರಸ್ತೆಗಳನ್ನು ತಡೆದಿರುವುದನ್ನು ತೆರೆವುಗೊಳಿಸಿದರೆ ಪ್ರತಿಭಟನಾ ನಿರತ ರೈತರ ಮೇಲಿನ ಮೊಕದ್ದಮೆಗಳನ್ನು ವಾಪಾಸು ಪಡೆಯುವುದು ಕೂಡಾ ಇದರಲ್ಲಿ ಸೇರಿದೆ.
ಸರ್ಕಾರದ ಪ್ರಸ್ತಾವಕ್ಕೆ ಸ್ಪಂದಿಸಿರುವ ರೈತ ಸಂಘಟನೆಗಳು, ತಕ್ಷಣವೇ ಕೇಂದ್ರ ಸರ್ಕಾರ ಪ್ರಕರಣಗಳನ್ನು ವಾಪಾಸು ಪಡೆಯುವ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿವೆ. ಪ್ರಸ್ತಾವನೆಯ ಕೆಲ ಅಂಶಗಳ ಬಗ್ಗೆ ಸ್ಪಷ್ಟನೆ ಪಡೆದ ಬಳಿಕ, ಪ್ರತಿಭಟನೆ ವಾಪಾಸು ಪಡೆಯುವ ಬಗ್ಗೆ ಬುಧವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈತಮುಖಂಡರು ಸ್ಪಷ್ಟಪಡಿಸಿದ್ದಾರೆ. ಆದರೆ ರೈತ ಮುಖಂಡರು ಮತ್ತು ಹಿರಿಯ ಸಚಿವರ ನಡುವೆ ನಡೆಯಲಿರುವ ಸಭೆಯ ಬಳಿಕ ಪ್ರತಿಭಟನೆ ವಾಪಾಸು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ದೆಹಲಿ ಗಡಿಯ ತಡೆಯನ್ನು ತೆರೆವುಗೊಳಿಸುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ರೈತರ ಪರ ವಕೀಲ ಪ್ರಶಾಂತ್ ಭೂಷಣ್ ಅವರು ಮನವಿ ಮಾಡಿಕೊಂಡಿರುವುದು ರಾಜಿ ಸಂಧಾನದ ಸುಳಿವು ನೀಡಿದೆ.
ಕನಿಷ್ಠ ಬೆಂಬಲಬೆಲೆ ಬಗ್ಗೆ ನಿರ್ಧರಿಸುವ ಸಮಿತಿಗೆ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಾತಿನಿಧ್ಯ, ರೈತರ ವಿರುದ್ಧದ ಪ್ರಕರಣಗಳನ್ನು ವಾಪಾಸು ಪಡೆಯುವುದು, ಪ್ರತಿಭಟನೆಯ ವೇಳೆ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ನೀಡುವುದು ಮತ್ತಿತರ ಅಂಶಗಳನ್ನು ಕೇಂದ್ರದ ಪ್ರಸ್ತಾವ ಒಳಗೊಂಡಿದೆ.