"ಹೆಲಿಕಾಪ್ಟರ್ ಗೆ ಬೆಂಕಿ ಹೊತ್ತಿ ಜನರು ಕೆಳಗೆ ಬೀಳುವುದನ್ನು ಕಣ್ಣಾರೆ ನೋಡಿದೆ": ಪ್ರತ್ಯಕ್ಷದರ್ಶಿಯ ಹೇಳಿಕೆ

ಚೆನ್ನೈ: ಸೇನಾಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಮಂದಿಯಿದ್ದ ಹೆಲಿಕಾಪ್ಟರ್ ನಂಝಪ್ಪನಚತ್ತಿರಂ ಪ್ರದೇಶದ ಕಟ್ಟೇರಿ ಪಾರ್ಕ್ ಎಂಬಲ್ಲಿ ಇಂದು ಪತನವಾಗುತ್ತಿರುವುದನ್ನು ನೋಡಿರುವ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು thenewsminute.comಗೆ ಹೇಳಿಕೆ ನೀಡಿದ್ದಾರೆ. ದೊಡ್ಡ ಸದ್ದಿನೊಂದಿಗೆ ಹೆಲಿಕಾಪ್ಟರ್ ಆಗಸದಿಂದ ನೆಲಕ್ಕಪ್ಪಳಿಸಿ ಬೆಂಕಿ ಹತ್ತಿಕೊಂಡಿತು, ಆ ಸಂದರ್ಭ ಮೂರರಿಂದ ನಾಲ್ಕು ಜನರು ಹೆಲಿಕಾಪ್ಟರ್ ಒಳಗಿನಿಂದ ಕೆಳಕ್ಕೆ ಬಿದ್ದರು ಎಂದು ಈ ವ್ಯಕ್ತಿ ಹೇಳಿದ್ದಾಗಿ ವರದಿ ತಿಳಿಸಿದೆ.
"ಹೆಲಿಕಾಪ್ಟರ್ ಪತನವಾಗುತ್ತಿರುವುದನ್ನು ನೋಡಿದೆ, ಭಾರೀ ಸದ್ದಾಗಿತ್ತು. ಅದು ಒಂದು ಮರಕ್ಕೆ ಢಿಕ್ಕಿ ಹೊಡೆಯಿತು ನಂತರ ಬೆಂಕಿ ಹತ್ತಿಕೊಂಡಿತು" ಎಂದು ಕೃಷ್ಣಸ್ವಾಮಿ ಎಂಬ ವ್ಯಕ್ತಿ ಹೇಳಿಕೊಂಡಿದ್ದಾರೆ. "ನನ್ನ ಮನೆ ಈ ಪ್ರದೇಶದಿಂದ 100 ಮೀಟರ್ ದೂರದಲ್ಲಿದೆ, ಅಪಘಾತ ಸುಮಾರು 12.20ರ ಹೊತ್ತಿಗೆ ನಡೆದಿದೆ. ಹೆಲಿಕಾಪ್ಟರ್ ಪತನಗೊಳ್ಳುವುದು ಮತ್ತು ಅದರಿಂದ ಜನರು ಬೀಳುವುದನ್ನು ನೋಡಿದೆ. ಕ್ಷಣಾರ್ಧದಲ್ಲೇ ಬೆಂಕಿಯು ನನ್ನ ಮನೆಗಿಂತ ಎತ್ತರದಲ್ಲಿ ಉರಿಯಲಾರಂಭಿಸಿತು. ಸ್ಥಳದಲ್ಲಿದ್ದ ಕುಮಾರ್ ಎಂಬ ಯುವಕ ಅರೆಕ್ಷಣದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದ, ನಂತರ ಅಲ್ಲಿರಲು ನನಗೆ ಹೆದರಿಕೆಯಾಯಿತು, ನಾನು ಅಲ್ಲಿಂದ ಬಂದುಬಿಟ್ಟೆ" ಎಂದು ಆ ವ್ಯಕ್ತಿ ಹೇಳಿದ್ದಾರೆ.







