ಜಮ್ಮು-ಕಾಶ್ಮೀರ: 370ನೇ ವಿಧಿ ರದ್ದುಗೊಂಡ ಬಳಿಕ ಸೇನೆಯಲ್ಲಿ ಸಾವುಗಳ ಇಳಿಕೆ, ನಾಗರಿಕರ ಸಾವುಗಳ ಏರಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.8: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾದ 2019,ಆ.5ರ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ತಿಂಗಳೊಂದರಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ಸರಾಸರಿ 3.2 ಸಾವುಗಳು ಸಂಭವಿಸಿವೆ,ಆ.5ಕ್ಕೆ ಮೊದಲಿನ ಐದು ವರ್ಷಗಳಲ್ಲಿ ತಿಂಗಳೊಂದಕ್ಕೆ ಸರಾಸರಿ 2.8 ಸಾವುಗಳು ಸಂಭವಿಸಿದ್ದವು. ಈ ಅವಧಿಗಳಲ್ಲಿ ಸೇನೆಯಲ್ಲಿ ತಿಂಗಳೊಂದಕ್ಕೆ ಅನುಕ್ರಮವಾಗಿ ಸರಾಸರಿ 1.7 ಮತ್ತು 2.8 ಸಾವುಗಳು ಸಂಭವಿಸಿವೆ ಎಂದು ಗೃಹ ಸಚಿವಾಲಯವು ಸಂಸತ್ತಿಗೆ ಒದಗಿಸಿರುವ ಅಂಕಿಅಂಶಗಳು ತೋರಿಸಿವೆ.
ಮೇ 2014 ಮತ್ತು ಆ.5,2019ರ ನಡುವಿನ 63 ತಿಂಗಳುಗಳಲ್ಲಿ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ದಾಳಿಗಳಲ್ಲಿ 177 ನಾಗರಿಕರು ಕೊಲ್ಲಲ್ಪಟ್ಟಿದ್ದರೆ ಆ.5,2019ರ ನಂತರದ 27 ತಿಂಗಳುಗಳಲ್ಲಿ ನವಂಬರ್ವರೆಗೆ 87 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಈ ಪೈಕಿ 40ಕ್ಕೂ ಅಧಿಕ ನಾಗರಿಕರು ಈ ವರ್ಷದಲ್ಲಿಯೇ ಕೊಲ್ಲಲ್ಪಟ್ಟಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ 255 ಮತ್ತು 2020ರಲ್ಲಿ 244 ಭೆತ್ಪಾದಕ ಘಟನೆಗಳು ನಡೆದಿದ್ದರೆ,ಈ ವರ್ಷ ಈ ಸಂಖ್ಯೆ ಈಗಾಗಲೇ 200ನ್ನು ದಾಟಿದೆ.
ಕಳೆದ ವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಅಂಕಿಅಂಶಗಳನ್ನು ಒದಗಿಸಿದ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗಳಲ್ಲಿ ಸಾವುಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಒತ್ತಿ ಹೇಳಿದ್ದರು.
ಕಳೆದ ಕೆಲವು ತಿಂಗಳುಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಅಲ್ಪಸಂಖ್ಯಾತರು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳು ನಡೆದಿದ್ದು,ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದಾಳಿಗಳು ಆರಂಭಗೊಂಡಾಗಿನಿಂದ 20ಕ್ಕೂ ಅಧಿಕ ಶಂಕಿತ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಮತ್ತು ಈ ಪೈಕಿ ಓರ್ವನನ್ನು ಹೊರತುಪಡಿಸಿ ಉಳಿದವರು ನಾಗರಿಕರ ಹತ್ಯೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗುಪ್ತಚರ ಘಟಕ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಉತ್ತಮ ಬೇಹು ಕಾರ್ಯಾಚರಣೆ ಯಶಸ್ವಿ ಎನ್ಕೌಂಟರ್ಗಳನ್ನು ನಡೆಸಲು ನೆರವಾಗಿದೆ. ದಾಳಿಗಳು ಮತ್ತು ಹತ್ಯೆಗಳನ್ನು ತಡೆಯಲೂ ನಮಗೆ ಸಾಧ್ಯವಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಇಡೀ ಭಯೋತ್ಪಾದನೆಯನ್ನು ಗಡಿಯಾಚೆಯಿಂದ ನಿರ್ವಹಿಸಲಾಗುತ್ತಿದೆ. ವಾಸ್ತವದಲ್ಲಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಒಬ್ಬನೇ ಒಬ್ಬ ಕಮಾಂಡರ್ ಕಣಿವೆಯಲ್ಲಿಲ್ಲ ಎಂದು ಭದ್ರತಾ ಅಧಿಕಾರಿಯೋರ್ವರು ಹೇಳಿದರು.







