ಭಾರತದ ವ್ಯೂಹಾತ್ಮಕ ಗುರಿಗಳಿಗೆ ಚೀನಾ ಬಹುದೊಡ್ಡ ಬೆದರಿಕೆಯಾಗಿದೆ: ವಾಯುಪಡೆ ಮುಖ್ಯಸ್ಥ ಚೌಧರಿ

ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ(photo:twitter/@IAF_MCC)
ಹೊಸದಿಲ್ಲಿ,ಡಿ.8: ಭಾರತವು ತನ್ನ ವ್ಯೂಹಾತ್ಮಕ ಗುರಿಗಳನ್ನು ಸಾಧಿಸುವಲ್ಲಿ ಚೀನಾ ಬಹುದೊಡ್ಡ ಬೆದರಿಕೆಯಾಗಿದೆ ಹಾಗೂ ಚೀನಾ ಮತ್ತು ಪಾಕಿಸ್ತಾನ ಭಾರತದ ಗಡಿಗಳಿಗೆ ಸಮೀಪ ತಮ್ಮ ವಾಯುಪಡೆಗಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುತ್ತಿವೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಬುಧವಾರ ಇಲ್ಲಿ ಹೇಳಿದರು.
ಭಾರತದ ರಾಷ್ಟ್ರೀಯ ಭದ್ರತೆ ಕುರಿತು ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು,ಇಂದಿನ ಭಾರತವು ಸಮರ್ಥವಾಗಿದೆ ಮತ್ತು ಹೆಚ್ಚು ಮುಖ್ಯವಾಗಿ ತಾನು ಸೂಕ್ತವೆಂದು ಪರಿಗಣಿಸುವ ಮಟ್ಟದಲ್ಲಿ ಉತ್ತರವನ್ನು ನೀಡುತ್ತದೆ ಎಂದು ಭಾರತ ಸರಕಾರವು ವಿಶ್ವಕ್ಕೆ ಪ್ರಬಲ ಸಂದೇಶವನ್ನು ರವಾನಿಸುವ ಅಗತ್ಯವಿದೆ ಎಂದರು.
ಚೀನಾದ ಆಧಿಪತ್ಯದ ಮತ್ತು ಕೆಲವೊಮ್ಮೆ ಬಲೆಗೆ ಸಿಲುಕಿಸುವ ನೀತಿಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳನ್ನು ನಿಯಂತ್ರಿಸಲು ಭಾರತಕ್ಕೆ ಅವಕಾಶಗಳನ್ನು ಒದಗಿಸಬಹುದು ಎಂದು ಚೌಧರಿ ಹೇಳಿದರು. ಪಾಕಿಸ್ತಾನದ ವಾಯುಪಡೆಯು ಹೊಸ ಆಸ್ತಿಗಳ ಖರೀದಿಯನ್ನು ಮತ್ತು ತನ್ನ ವಾಯುರಕ್ಷಣಾ ಸಾಮರ್ಥ್ಯದ ಉನ್ನತೀಕರಣವನ್ನು ಮುಂದುವರಿಸಿದೆ ಮತ್ತು ಇದೇ ವೇಳೆ ಪ್ರಧಾನವಾಗಿ ರಕ್ಷಣಾತ್ಮಕ ಯದ್ಧದಿಂದ ಹೆಚ್ಚು ಆಕ್ರಮಣಕಾರಿ ರಕ್ಷಣಾತ್ಮಕ ನಿಲುವನ್ನು ಅಳವಡಿಸಿಕೊಳ್ಳುತ್ತಿದೆ.
ಉಪಕರಣಗಳು ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಚೀನಿ ಮತ್ತು ಪಾಕಿಸ್ತಾನಿ ವಾಯುಪಡೆಗಳು ತಮ್ಮ ಮಿಲಿಟರಿ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿವೆ ಎಂದ ಅವರು,ತನ್ನ ಅಭಿಪ್ರಾಯದಲ್ಲಿ ಭಾರತದ ವ್ಯೂಹಾತ್ಮಕ ಗುರಿಗಳ ಸಾಧನೆಯಲ್ಲಿ ಚೀನಾ ಹೆಚ್ಚು ಮಹತ್ವದ ಮತ್ತು ದೀರ್ಘಾವಧಿಯ ಸವಾಲು ಒಡ್ಡುತ್ತಿದೆ ಎಂದರು. ಚೀನಾದ ಹೆಚ್ಚುತ್ತಿರುವ ಪ್ರಭಾವವು ಖಂಡಿತವಾಗಿಯೂ ಆರ್ಥಿಕ ಕ್ಷೇತ್ರದಲ್ಲಿ ವಿವಾದಗಳು ಮತ್ತು ಸ್ಪರ್ಧೆಗಳನ್ನು ಹೆಚ್ಚಿಸಲಿದೆ ಮತ್ತು ಬಗೆಹರಿಯದ ಗಡಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರತವನ್ನು ವ್ಯಸ್ತಗೊಳಿಸಲು ಅದು ಪ್ರಯತ್ನಿಸಲಿದೆ ಎಂದು ಹೇಳಿದ
ಚೌಧರಿ,ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ವಿಮಾನಗಳು ಮತ್ತು ಹೆಚ್ಚುವರಿ ವಾಯುನೆಲೆಗಳ ರೂಪದಲ್ಲಿ ತನ್ನ ವಾಯುಪಡೆಯ ಕಾರ್ಯಾಚರಣೆಗಳಿಗಾಗಿ ಮೂಲಸೌಕರ್ಯಗಳ ತ್ವರಿತ ವರ್ಧನೆಯಲ್ಲಿ ಚೀನಾದ ಆಕ್ರಮಣಕಾರಿ ಉದ್ದೇಶವು ಗೋಚರಿಸುತ್ತಿದೆ ಎಂದರು. ದೇಶವು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸುತ್ತಿದ್ದಾಗ ಉತ್ತರದ ಗಡಿಯಲ್ಲಿ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ತನ್ನ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ ಎಂದ ಅವರು,ಭಾರತದ ಭದ್ರತಾ ವ್ಯವಸ್ಥೆಯು ಬಹುಮುಖಿ ಬೆದರಿಕೆಗಳು ಮತ್ತು ಸವಾಲುಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಪಾಕಿಸ್ತಾನ ಕುರಿತು ಚೌಧರಿ,ಪಶ್ಚಿಮ ಮುಂಚೂಣಿಯಲ್ಲಿ ಯುದ್ಧರಹಿತ ಮತ್ತು ಶಾಂತಿರಹಿತ ಸ್ಥಿತಿ ಮುಂದುವರಿದಿದೆ. ಸದ್ಯೋಭವಿಷ್ಯದಲ್ಲಿ ಕಾಶ್ಮೀರ ಕುರಿತು ಪಾಕಿಸ್ತಾನದ ಕಾರ್ಯತಂತ್ರದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ತನ್ನದೇ ಆದ ಆಂತರಿಕ ಸಮಸ್ಯೆಗಳು ಮತ್ತು ಆರ್ಥಿಕ ದೌರ್ಬಲ್ಯಗಳಿದ್ದರೂ ಅದು ಸರಕಾರದ ನೀತಿಯಾಗಿ ಭಯೋತ್ಪಾದನೆಯ ಪ್ರಾಯೋಜಕತ್ವವನ್ನು ಮಂದುವರಿಸಲಿದೆ ಎಂದು ಹೇಳಿದರು.







