ಯೇಸು ಸಮಾಧಿ ಸ್ಥಳ ಕಾಶ್ಮೀರದಲ್ಲಿದೆ : ಸುಬ್ರಹ್ಮಣ್ಯನ್ ಸ್ವಾಮಿ

ಉಡುಪಿ, ಡಿ.8: ಯೇಸುಕ್ರಿಸ್ತ ಲಡಾಕ್‌ನಲ್ಲಿ ಬೌದ್ಧ ಧರ್ಮ ಅಧ್ಯಯನ ನಡೆಸಿ ತವರೂರಿಗೆ ವಾಪಾಸು ಹೋಗಿರುವ ಬಗ್ಗೆ ದಾಖಲೆಗಳಿವೆ. ಕಾಶ್ಮೀರದ ಶ್ರೀನಗರ ಸಮೀಪ ಕನ್ನಿಯೂರು ಎಂಬಲ್ಲಿ ಯೇಸು ಸಮಾಧಿ ಸ್ಥಳ ಎಂದು ನಮೂದಿಸಿದ ಕಟ್ಟಡವಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಯಾವ ಸರಕಾರಕ್ಕೂ ಆಸಕ್ತಿ ಇಲ್ಲ ಎಂದು ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ವಿಶ್ವಾರ್ಪಣಮ್ ಸಮಾರಂಭದಲ್ಲಿ ಅವರು ಪ್ರಾಚೀನ ಮತ್ತು ಜೀವಂತವಿರುವ ಹಿಂದೂ ನಾಗರಿಕತೆಯ ಭಾಗವಾಗಿರಲು ಹೆಮ್ಮೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎಲ್ಲರ ಭಾರತೀಯ ಡಿಎನ್‌ಎ ಒಂದೇ ಆಗಿದ್ದು, ದ್ರಾವಿಡ ಮತ್ತು ಆರ್ಯ ವಾದ ಎಂಬುದು ಶುದ್ಧ ಸುಳ್ಳು. ಸ್ವತಃ ಶಂಕರಾಚಾರ್ಯರು ತನ್ನನ್ನು ತಾನು ದ್ರಾವಿಡ ಶಿಶು ಎಂಬುದಾಗಿ ಹೇಳಿಕೊಂಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ತಿಳಿಸಿದ್ದಾರೆ.
ಪಾಶ್ಚಾತ್ಯ ದೇಶದ ವಿಜ್ಞಾನಿಗಳಿಗಿಂತ ಎರಡು ಸಾವಿರ ವರ್ಷಗಳ ಹಿಂದೆಯೇ ಭಾರತದ ವಿದ್ವಾಂಸರು ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದರೆ ಬ್ರಿಟಿಷರು 1835ರಲ್ಲಿ ಜಾರಿಗೆ ತಂದ ಆಂಗ್ಲ ಶಿಕ್ಷಣ ನೀತಿಯಿಂದ ಜನರ ಮನಪರಿವರ್ತನೆಯಾಗಿದೆ. ಇದನ್ನು ಬದಲಾಯಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದಲ್ಲಿ ಮಾತ್ರ ಪುನರ್ ಜನ್ಮ ಎಂಬುದು ಇರುವುದರಿಂದ ತಪ್ಪು ಮಾಡಿದರೂ ಮತ್ತೊಂದು ಜನ್ಮದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ. ಬೇರೆ ಧರ್ಮಗಳಲ್ಲಿ ಅದು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಹಿಂದೂ ಧರ್ಮವೇ ಶ್ರೇಷ್ಠ ಎಂದು ಹೇಳಿದರು.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ ಅವರನ್ನು ಸನ್ಮಾನಿಸಲಾಯಿತು. ಮಠದ ವ್ಯವಸ್ಥಾಪಕ ಗೋವಿಂದ ರಾಜ್ ಮತ್ತು ಎಂ.ಎಲ್.ಸಾಮಗ ಸ್ವಾಗತಿಸಿದರು. ಕುತ್ಪಾಡಿ ಕೃಷ್ಣರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.







