ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ, ಕೋವಿಡ್ ಲಸಿಕೆ ಪಡೆಯಲು ಸೂಚನೆ

ಬೆಂಗಳೂರು, ಡಿ.8: ಡಿಸೆಂಬರ್ 10ಕ್ಕೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ-2021 ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಮತದಾರರು ಕೋವಿಡ್ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ಬುಧವಾರ ಕೆಜಿ ರಸ್ತೆಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಿಬ್ಬಂದಿ ಹಾಗೂ ಮತದಾರರು ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಪ್ರಮಾಣ ಪತ್ರವನ್ನು ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಯಲಹಂಕ, ಆನೇಕಲ್, ಬೆಂಗಳೂರು ಉತ್ತರ ಸೇರಿದಂತೆ ಬೆಂಗಳೂರು ನಗರಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 2073 ಮತದಾರರಿದ್ದು, ಮತದಾನ ಪ್ರಕ್ರಿಯೆಗೆ ಒಟ್ಟು 83 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಅತೀ ಸೂಕ್ಷ್ಮ ಮೂರು ಮತಗಟ್ಟೆಗಳಿದ್ದು, ಸೂಕ್ಷ್ಮಮತಗಟ್ಟೆಗಳು 38 ಇವೆ ಎಂದು ಅವರು ವಿವರಿಸಿದರು.
ಅನಕ್ಷರಸ್ಥ ಮತದಾರರಿಗೆ ಸಹಾಯಕರನ್ನು ಪಡೆದಿರುವ ಸಂಖ್ಯೆಯೂ ಕಡಿಮೆ ಇದೆ. ಮತದಾನ ಪ್ರಕ್ರಿಯೆಗೆ ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 17 ಬಿಎಂಟಿಸಿ ಬಸ್ ನಿಯೋಜಿಸಲಾಗಿದೆ. ಅದೇ ರೀತಿಯಲ್ಲಿ, ಐದು ತಾಲೂಕುಗಳಲ್ಲಿ ಒಟ್ಟು 14 ಸೆಕ್ಟರಲ್ ಅಧಿಕಾರಿಗಳು ಹಾಗೂ 15 ಎಂಸಿಸಿ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಪೊಲೀಸರು ಭದ್ರತೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ನಾಲ್ವರು ಡಿವೈಎಸ್ಪಿ, 18 ಇನ್‍ಸ್ಪೆಕ್ಟರ್ ಸೇರಿದಂತೆ ಒಟ್ಟು 313 ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಮತದಾನಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ಸಹಾಯಕ್ಕಾಗಿ ಸಹಾಯವಾಣಿ 080-22211106 ಅನ್ನು ಸಂಪರ್ಕಿಸಬಹುದು ಎಂದು ಮಂಜುನಾಥ್ ಮಾಹಿತಿ ನೀಡಿದರು.
ಡಿ.14ರಂದು ಮತ ಎಣಿಕೆ
ಮತದಾನ ಪೂರ್ಣಗೊಂಡ ಬಳಿಕ ಡಿ.14ರಂದು ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅಂದು ಬೆಳಗ್ಗೆ 8 ಗಂಟೆಗೆ ಮತಗಳ ಎಣಿಕೆ ನಡೆಯಲಿದೆ.
ಮದ್ಯ ಮಾರಾಟ, ಸಾಗಾಣಿಕೆ ನಿಷೇಧ
ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಡಿ. 8ರ ಸಂಜೆ 4ರಿಂದ ಡಿ. 10ರ ರಾತ್ರಿ 10 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಮದ್ಯ ಮುಕ್ತ ದಿನವೆಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
.jpg)







