ಜೈಲು ಅಧಿಕಾರಿಗಳು ನನಗೆ ಔಷಧಿ ನಿರಾಕರಿಸುತ್ತಿದ್ದಾರೆ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಸುರೇಂದ್ರ ಗಡ್ಲಿಂಗ್

ಸುರೇಂದ್ರ ಗಡ್ಲಿಂಗ್(photo:PTI)
ಮುಂಬೈ,ಡಿ.8: ಮಹಾರಾಷ್ಟ್ರದ ತಲೋಜಾ ಜೈಲಿನ ಅಧೀಕ್ಷಕರು ತಾನು ತನ್ನ ಆಯುರ್ವೇದ ಔಷಧಿಗಳನ್ನು ಪಡೆಯುವುದನ್ನು ನಿರಾಕರಿಸುತ್ತಿದ್ದಾರೆ ಎಂದು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ವಕೀಲ ಸುರೇಂದ್ರ ಗಡ್ಲಿಂಗ್ ಅವರು ಆರೋಪಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ವಿಚಾರಣಾ ನ್ಯಾಯಾಲಯವು ತನಗೆ ಔಷಧಿಗಳನ್ನು ಬಳಸಲು ಅನುಮತಿ ನೀಡಿತ್ತು ಎಂದು ಗಡ್ಲಿಂಗ್ ಹೇಳಿದ್ದಾರೆ. ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದಿದ್ದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗಡ್ಲಿಂಗ್ ಜೂನ್ 2018ರಿಂದಲೂ ಜೈಲಿನಲ್ಲಿದ್ದಾರೆ. ಹಿಂಸಾಚಾರಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ 16 ಜನರಲ್ಲಿ ಅವರು ಓರ್ವರಾಗಿದ್ದಾರೆ. ಅವರ ಕಂಪ್ಯೂಟರ್ನಲ್ಲಿ ದುರುದ್ದೇಶದಿಂದ ಸಾಕ್ಷಾಧಾರಗಳನ್ನು ಅಳವಡಿಸಲಾಗಿತ್ತು ಎನ್ನುವುದನ್ನು ಅಮೆರಿಕದ ಡಿಜಿಟಲ್ ವಿಧಿವಿಜ್ಞಾನ ಸಂಸ್ಥೆಯೊಂದು ಕಳೆದ ಜುಲೈನಲ್ಲಿ ಪತ್ತೆ ಹಚ್ಚಿತ್ತು.
ಗಡ್ಲಿಂಗ್ ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮತ್ತು ಇತರ ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂದು ವರದಿಯು ತಿಳಿಸಿದೆ. ತಲೋಜಾ ಜೈಲಿನ ಅಧೀಕ್ಷಕ ಯು.ಟಿ.ಪವಾರ್ ಅವರು ತನಗೆ ಔಷಧಿಗಳನ್ನು ನಿರಾಕರಿಸುತ್ತಿದ್ದಾರೆ ಎಂದು ದೂರಿ ಗಡ್ಲಿಂಗ್ ಮಹಾರಾಷ್ಟ್ರದ ಬಂದೀಖಾನೆಗಳ ಹೆಚ್ಚುವರಿ ಮಹಾ ನಿರ್ದೇಶಕ ಅತುಲಚಂದ್ರ ಕುಲಕರ್ಣಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ನ.23ರಂದು ನಾಗಪುರದಿಂದ ಬಂದಿದ್ದ ತನ್ನ ಪುತ್ರ ನ್ಯಾಯಾಲಯದಲ್ಲಿ ತನಗೆ ತಿಂಗಳ ಔಷಧಿಗಳನ್ನು ನೀಡಿದ್ದ. ತಾನು ತಲೋಜಾ ಜೈಲಿಗೆ ಮರಳಿದಾಗ ಪ್ರವೇಶದ್ವಾರದಲ್ಲಿ ತನ್ನನ್ನು ತಡೆದು ಔಷಧಿಗಳನ್ನು ಜೈಲಿನೊಳಗೆ ಒಯ್ಯಲು ಅವಕಾಶವನ್ನು ನಿರಾಕರಿಸಲಾಗಿತ್ತು. ಜೈಲಿನ ಆವರಣದಲ್ಲಿ ಆಯುರ್ವೇದ ಔಷಧಿಗಳಿಗೆ ಅವಕಾಶ ನೀಡದಂತೆ ಪವಾರ್ ಆದೇಶಿಸಿದ್ದಾರೆ ಎಂದು ಸಿಬ್ಬಂದಿಗಳು ತನಗೆ ತಿಳಿಸಿದ್ದರು ಎಂದು ಗಡ್ಲಿಂಗ್ ಆರೋಪಿಸಿದ್ದಾರೆ.
ಔಷಧಿಗಳ ನಿರಾಕರಣೆಯ ಪರಿಣಾಮ ಗಡ್ಲಿಂಗ್ರ ಆರೋಗ್ಯ ಹದಗೆಟ್ಟಿದೆ ಎಂದು ವರದಿಯು ತಿಳಿಸಿದೆ.