ಎಂಐ-17ವಿ5: ದಾರುಣ ಅಂತ್ಯಕಂಡ ಅತ್ಯಾಧುನಿಕ ಸೇನಾ ಸಾರಿಗೆ ಹೆಲಿಕಾಪ್ಟರ್

photo:PTI
ರಕ್ಷಣಾಪಡೆಗಳ ವರಿಷ್ಠ ಜನರಲ್ ಬಿಪಿನ್ರಾವತ್ ಪ್ರಯಾಣಿಸುತ್ತಿದ್ದಾಗ ಪತನಗೊಂಡ ಎಂಐ-17ವಿ5 ಸೇನಾ ಹೆಲಿಕಾಪ್ಟರ್ ರಶ್ಯ ನಿರ್ಮಿತವಾದುದಾಗಿದೆ. ಇದು ಕೊಯಮತ್ತೂರು ಸಮೀಪದ ಸುಲೂರು ವಾಯುನೆಲೆಯಲ್ಲಿ ನಿಯೋಜಿತವಾಗಿರುವ 109 ಹೆಲಿಕಾಪ್ಟರ್ ಘಟಕಕ್ಕೆ ಸೇರಿದೆ. ಜಗತ್ತಿನಾದ್ಯಂತ ಬಳಕೆಯಲ್ಲಿರುವ ಸೇನಾ ಸಾರಿಗೆ ಹೆಲಿಕಾಪ್ಟರ್ ಆಗಿರುವ ಎಂಐ-17ವಿ5, ರಶ್ಯ ಮೂಲದ ಎಂಐ-8/17ಹೆಲಿಕಾಪ್ಟರ್ ಶ್ರೇಣಿಗಳ ಒಂದು ಭಾಗವಾಗಿದೆ.
80 ಎಂಐ-17ವಿ5 ಹೆಲಿಕಾಪ್ಟರ್ಗಳ ನಿರ್ಮಾಣಕ್ಕಾಗಿ ಭಾರತ ಸರಕಾರವು 2008ರಲ್ಲಿ ರಶ್ಯದ ತಯಾರಿಕಾ ಕಂಪೆನಿಗೆ ಗೆ 130 ಕೋಟಿ ಡಾಲರ್ ಮೊತ್ತದ ಗುತ್ತಿಗೆಯನ್ನು ನೀಡಿತ್ತು. ಈ ಪೈಕಿ ಮೊದಲ ಮೂರು ಹೆಲಿಕಾಪ್ಟರ್ಗಳನ್ನು 2013ರಲ್ಲಿ ಭಾರತಕ್ಕೆ ಪೂರೈಕೆ ಮಾಡಲಾಗಿತ್ತು. 2018ರಲ್ಲಿ ಈ ಶ್ರೇಣಿಯ ಹೆಲಿಕಾಪ್ಟರ್ಗಳ ಅಂತಿಮ ತಂಡವು ಆಗಮಿಸಿತ್ತು.
ಎಂಐ-17ವಿ5 ಹೆಲಿಕಾಪ್ಟರ್ಗಳ ಸೇನಾಪಡೆಗಳ ಸಾಗಾಟಕ್ಕೆ 36 ಆಸನಗಳ ಹೆಲಿಕಾಪ್ಟರ್, ಸರಕುಸಾಗಾಣೆಗೆ ಹಾಗೂ ತುರ್ತು ಕಾರ್ಯಾಚರಣೆ ಹೀಗೆ ವೈವಿಧ್ಯಮಯ ನಮೂನೆಗಳಲ್ಲಿ ನಿರ್ಮಾಣವಾಗುತ್ತಿವೆ. ಈ ಹೆಲಿಕಾಪ್ಟರನ್ನು ಓರ್ವ ಪೈಲಟ್, ಸಹಪೈಲಟ್ ಹಾಗೂ ಫ್ಲೈಟ್ ಇಂಜಿನಿಯರ್ ಸೇರಿದಂತೆ ಮೂವರು ವೈಮಾನಿಕ ಸಿಬ್ಬಂದಿ ನಿರ್ವಹಿಸುತ್ತಾರೆ.
ಈ ಹೆಲಿಕಾಪ್ಟರ್ನ ಬಾಲದ ಭಾಗದಲ್ಲಿ ಏಕೈಕ ತಿರುಗಣೆ (ರೊಟೋರ್)ಯಿದೆ. ಡಾಲ್ಫಿನ್ ಮೂತಿಯನ್ನು ಹೊಂದಿರುವ ಈ ಹೆಲಿಕಾಪ್ಟರ್ನಲ್ಲಿ ಹೆಚ್ಚುವರಿಯಾಗಿ ಸ್ಟಾರ್ಬೋರ್ಡ್ ಸ್ಲೈಡಿಂಗ್ ಹಾಗೂ ಪೋರ್ಟ್ ಸ್ಲೈಡಿಂಗ್ ಬಾಗಿಲುಗಳು ಅಳವಡಿಸಲಾಗಿದೆ.
ತಾಸಿಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಹಾರಬಲ್ಲ ಈ ಹೆಲಿಕಾಪ್ಟರ್ನ ಪ್ರಧಾನ ತೈಲ ಟ್ಯಾಂಕ್ 675 ಕಿ.ಮೀ.ವರೆಗೆ ಪ್ರಯಾಣಿಸಲು ಸಾಧ್ಯವಾಗುವಷ್ಟು ತೈಲ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಎರಡು ಆಕ್ಸಿಲರಿ ತೈಲ ಟ್ಯಾಂಕ್ಗಳೊಂದಿಗೆ ಅದು 1180 ಕಿ.ಮೀ. ದೂರವರೆಗೆ ಹಾರಬಲ್ಲದು. ಈ ಹೆಲಿಕಾಪ್ಟರ್ ಗರಿಷ್ಠ 4 ಸಾವಿರ ಕೆ.ಜಿ. ಪೇಲೋಡ್ ಅನ್ನು ಕೊಂಡೊಯ್ಯಬಲ್ಲದು.