ನಾಗಾಲ್ಯಾಂಡ್ ನಾಗರಿಕರ ಹತ್ಯೆ ಪ್ರಕರಣ: ಭದ್ರತಾ ಪಡೆ ನಮ್ಮ ಮೇಲೆ ನೇರವಾಗಿ ಗುಂಡು ಹಾರಿಸಿತು; ಸಂತ್ರಸ್ತ ಆರೋಪ

ಸಾಂದರ್ಭಿಕ ಚಿತ್ರ
ದಿಬ್ರುಗಢ, ಡಿ. 8: ‘‘ಅವರು ನಮ್ಮ ಮೇಲೆ ನೇರವಾಗಿ ಗುಂಡು ಹಾರಿಸಿದರು’’ ಎಂದು 8 ಮಂದಿ ಅಪ್ರಾಪ್ತರು ಸಾವನ್ನಪ್ಪಲು ಕಾರಣವಾದ ನಾಗಾಲ್ಯಾಂಡ್ ನ ಮೊನ್ ಜಿಲ್ಲೆಯ ಒಟಿಂಗ್ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಹೊಂಚು ದಾಳಿಯಲ್ಲಿ ಪಾರಾದ ಇಬ್ಬರಲ್ಲಿ ಓರ್ವನಾಗಿರುವ ಶೈವಾಂಗ್ ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಭಾರತೀಯ ಸೇನೆ ನಡೆಸಿದ ಹೊಂಚು ದಾಳಿಯಿಂದ ಮೊಣಕೈ ಹಾಗೂ ಎದೆಗೆ ಗುಂಡಿನ ಗಾಯವಾದ ಹಿನ್ನೆಲೆಯಲ್ಲಿ ಶೈವಾಂಗ್ ದಿಬ್ರುಗಢದ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆ (ಎಎಂಸಿಎಚ್)ಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆಸ್ಪತ್ರೆಯಲ್ಲಿ ಅವರಿಂದ ಒಂದೆರೆಡು ಬೆಡ್ಗಳ ಬಳಿಕದ ಬೆಡ್ನಲ್ಲಿ ಇರುವ 30ರ ಹರೆಯದ ಯೈಹ್ವಾಂಗ್ ಕೂಡ 8 ಮಂದಿಯ ಗುಂಪಿನಲ್ಲಿದ್ದ. ಆತನಿಗೆ ಪ್ರಜ್ಞೆ ಬಂದಿದ್ದರೂ ಮಾತನಾಡಲು ಕಷ್ಟವಾಗುತ್ತಿದೆ. ಯೈಹ್ವಾಂಗ್ನ ಕಿವಿಯ ಸಮೀಪ ಗುಂಡು ಹಾರಿ ಹೋಗಿದೆ.
ಆದರೆ, ಕೇಂದ್ರ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಸೋಮವಾರ ನೀಡಿದ ಹೇಳಿಕೆಯಲ್ಲಿ, ವಾಹನ ನಿಲ್ಲಿಸುವಂತೆ ಸೂಚಿಸಲಾಗಿತ್ತು. ವಾಹನ ನಿಲ್ಲಿಸದೇ ಇದ್ದಾಗ ಭದ್ರತಾ ಪಡೆ ಗುಂಡು ಹಾರಿಸಿತು ಎಂದು ಹೇಳಿದ್ದರು. ಆದರೆ, ಶೈವಾಂಗ್. ‘‘ನಮಗೆ ವಾಹನ ನಿಲ್ಲಿಸುವಂತೆ ಸೂಚನೆ ನೀಡಿರಲಿಲ್ಲ. ಅವರು ನೇರವಾಗಿ ಗುಂಡು ಹಾರಿಸಿದರು. ನಾವು ಪರಾರಿಯಾಗಲು ಪ್ರಯತ್ನಿಸಲಿಲ್ಲ. ನಾವು ವಾಹನದಲ್ಲೇ ಇದ್ದೆವು’’ ಎಂದಿದ್ದಾರೆ. ಘಟನೆಯನ್ನು ನೆನಪಿಸಿಕೊಂಡ ಶೈವಾಂಗ್, ಕಳೆದ ಶುಕ್ರವಾರ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮುಗಿಸಿದ ಬಳಿಕ, ನಾವು 8 ಮಂದಿ ಪಿಕ್ ಅಪ್ ಟ್ರಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದೆವು ಎಂದು ತಿಳಿಸಿದ್ದಾರೆ.
‘‘ನಾವು ವಾಹನದಲ್ಲಿ ಸಾಗುತ್ತಿರುವಾಗ, ಅವರು ಇದ್ದಕ್ಕಿದ್ದಂತೆ ಗುಂಡು ಹಾರಿಸಿದರು. ಇದು ಎಷ್ಟು ಕಾಲ ನಡೆಯಿತು ಎಂದು ನನಗೆ ನೆನಪಿಲ್ಲ. ಆದರೆ, ಅದು ಸ್ಪಲ್ಪ ಕಾಲ ಇತ್ತು. ಬಾಂಬ್ ಸ್ಫೋಟದಂತೆ ಅದರ ಸದ್ದು ಇತ್ತು. ಆಗ ಕತ್ತಲು ಕೂಡ ಆಗಿರಲಿಲ್ಲ. ಅವರು ಮತ್ತೆ ಕೂಡ ನಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು ’’ ಎಂದು ಅವರು ಹೇಳಿದ್ದಾರೆ. ಸೇನೆ ಗುಂಡು ಹಾರಿಸಲು ಆರಂಭಿಸುತ್ತಿದ್ದಂತೆ ನಾವು ವಾಹನದ ಒಳಗೆ ಬಗ್ಗಿ ಕುಳಿತುಕೊಂಡೆವು. ಅನಂತರ ಗುಂಡು ತಾಗಿ ನೆಲಕ್ಕೆ ಬಿದ್ದೆವು ಎಂದು ಅವರು ಹೇಳಿದ್ದಾರೆ. ‘‘ಗೋಲಿಬಾರ್ ಮುಗಿದ ಬಳಿಕ ನನ್ನನ್ನು ಇನ್ನೊಂದು ವಾಹನದಲ್ಲಿ ಕೊಂಡೊಯ್ಯಲಾಯಿತು. ನನಗೆ ನನ್ನ ಸಹೋದರ ಸೇರಿದಂತೆ ಇತರರು ಸಾವನ್ನಪ್ಪಿದ ಬಗ್ಗೆ ತಿಳಿದಿದೆ’’ ಎಂದು ಅವರು ಹೇಳಿದ್ದಾರೆ.