ದಿಲ್ಲಿ ಹಿಂಸಾಚಾರ: ಪೊಲೀಸ್ ಗೆ ಪಿಸ್ತೂಲ್ ತೋರಿಸಿದ ವ್ಯಕ್ತಿಯ ವಿರುದ್ಧ ಹತ್ಯೆ ಯತ್ನದ ದೋಷಾರೋಪ ಹೊರಿಸಿದ ಕೋರ್ಟ್

ಹೊಸದಿಲ್ಲಿ, ಡಿ. 8: ಹೊಸದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಪೊಲೀಸರೊಬ್ಬರಿಗೆ ಪಿಸ್ತೂಲು ತೋರಿಸಿದ ಆರೋಪಕ್ಕೆ ಸಂಬಂಧಿಸಿ ಶಾರುಖ್ ಪಠಾಣ್ ವಿರುದ್ಧ ದಿಲ್ಲಿ ನ್ಯಾಯಾಲಯ ಮಂಗಳವಾರ ದೋಷಾರೋಪ ಹೊರಿಸಿದೆ. ಈಶಾನ್ಯ ದಿಲ್ಲಿಯ ರಸ್ತೆಯಲ್ಲಿ ಪಠಾಣ್ ಪಿಸ್ತೂಲು ಹಿಡಿದುಕೊಂಡಿರುವ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ಈತನಲ್ಲದೆ ಶಮೀಮ್, ಅಬ್ದುಲ್ ಶೆಹ್‌ಝಾದ್, ಇಸ್ತಿಯಾಕ್ ಮಲಿಕ್, ಕಲೀಮ್ ಅಹ್ಮದ್ ವಿರುದ್ಧ ಕೂಡ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ದೋಷಾರೋಪ ಹೊರಿಸಿದ್ದಾರೆ. ಪಠಾಣ್, ಶೆಹ್‌ಝಾದ್ ಹಾಗೂ ಮಲಿಕ್ ವಿರುದ್ಧ ಹತ್ಯೆ ಯತ್ನ, ಗಲಭೆ, ಸರಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಕಾನೂನು ಬಾಹಿರವಾಗಿ ಗುಂಪು ಕೂಡಿರುವ ದೋಷಾರೋಪ ಹೊರಿಸಲಾಗಿದೆ.
ಪಠಾಣ್ ವಿರುದ್ಧ ಅಕ್ರಮವಾಗಿ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಹಾಗೂ 27ರ ಅಡಿಯಲ್ಲಿ ಹಾಗೂ ಅಹ್ಮದ್ ವಿರುದ್ಧ ಆರೋಪಿಗೆ ಆಶ್ರಯ ನೀಡಿದ ದೋಷಾರೋಪ ಹೊರಿಸಲಾಗಿದೆ. ಪಠಾಣ್ ನೇತೃತೃದ ಗಲಭೆಕೋರರ ಗುಂಪು ಹೆಡ್ ಕಾನ್ಸ್‌ಟೆಬಲ್ ದೀಪ್ ದಹಿಯಾ ಅವರನ್ನು ಗುರಿಯಾಗಿರಿಸಿರುವುದು ಸ್ಪಷ್ಟ ಎಂದು ನ್ಯಾಯಾಲಯ ಹೇಳಿದೆ. ಪಠಾಣ್ ನೇರವಾಗಿ ಪಿಸ್ತೂಲು ಎತ್ತಿದ್ದಾನೆ. ಪಕ್ಕಕ್ಕೆ ಅಲ್ಲ. ಅಲ್ಲದೆ, ಆತ ದಹಿಯಾ ಅವರ ತಲೆಗೆ ಪಿಸ್ತೂಲನ್ನು ಗುರಿ ಇರಿಸಿರುವುದು ವೀಡಿಯೊ ತುಣಕಿನಲ್ಲಿ ಕಾಣುತ್ತದೆ ಎಂದು ನ್ಯಾಯಮೂರ್ತಿ ಉಲ್ಲೇಖಿಸಿದ್ದಾರೆ.