ಐಎಎಫ್ ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆಗೆ ಆದೇಶ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ,ಡಿ.9: ಸಿಡಿಎಸ್ ಜನರಲ್ ಬಿಪಿನ್ ರಾವತ್,ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಜನರ ಸಾವಿಗೆ ಕಾರಣವಾದ ಬುಧವಾರದ ಹೆಲಿಕಾಪ್ಟರ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಭಾರತೀಯ ವಾಯುಪಡೆಯು ಆದೇಶಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು.
ಜ.ರಾವತ್(63) ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿತ್ತು.
ಸ್ವತಃ ಹೆಲಿಕಾಪ್ಟರ್ ಪೈಲಟ್ ಆಗಿರುವ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರಿಗೆ ತನಿಖೆಯ ನೇತೃತ್ವವನ್ನು ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ತನಿಖಾ ತಂಡವು ಬುಧವಾರವೇ ವೆಲಿಂಗ್ಟನ್ ತಲುಪಿದ್ದು,ತನಿಖೆಯನ್ನು ಆರಂಭಿಸಿದೆ ಎಂದರು.
ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿಯಾಗಿರುವ ಗ್ರೂಪ್ ಕ್ಯಾಪ್ಟನ್ ವರುಣ ಸಿಂಗ್ ಅವರನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವೆಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿರುವ ಅವರಿಗೆ ಜೀವರಕ್ಷಕ ಉಪಕರಣವನ್ನು ಅಳವಡಿಸಲಾಗಿದೆ ಎಂದು ಸಿಂಗ್ ತಿಳಿಸಿದರು.
ಜ.ರಾವತ್ ಮತ್ತು ಅವರ ಪತ್ನಿಯ ಪಾರ್ಥಿವ ಶರೀರಗಳನ್ನು ದಿಲ್ಲಿಗೆ ತರಲಾಗಿದ್ದು,ಶುಕ್ರವಾರ ಅಂತ್ಯಸಂಸ್ಕಾರವನ್ನು ನಡೆಸಲಾಗುವುದು ಎಂದು ತಿಳಿಸಿದ ಸಿಂಗ್,ಹೆಲಿಕಾಪ್ಟರ್ನ ಫ್ಲೈಟ್ ಡಾಟಾ ರೆಕಾರ್ಡರ್ ಪತ್ತೆಯಾಗಿದೆ ಎಂದು ಹೇಳಿದರು.
ಘಟನೆಯನ್ನು ಮೆಲುಕು ಹಾಕಿದ ಸಿಂಗ್,ಜ.ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬುಧವಾರ ಅಪರಾಹ್ನ 12:15ಕ್ಕೆ ವೆಲಿಂಗ್ಟನ್‌ನಲ್ಲಿ ಇಳಿಯಬೇಕಾಗಿತ್ತು,ಆದರೆ 12:08 ಗಂಟೆಗೆ ಅದು ಸಂಪರ್ಕವನ್ನು ಕಳೆದುಕೊಂಡಿತ್ತು. ಕೂನೂರು ಸಮೀಪ ಅರಣ್ಯದಲ್ಲಿ ಬೆಂಕಿಯನ್ನು ಗಮನಿಸಿದ್ದ ಕೆಲವು ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಮಿಲಿಟರಿ ಹೆಲಿಕಾಪ್ಟರ್‌ನ ಅವಶೇಷಗಳನ್ನು ಬೆಂಕಿಯ ಜ್ವಾಲೆಗಳು ಆವರಿಸಿಕೊಂಡಿದ್ದವು. ಸ್ಥಳೀಯಾಡಳಿತದಿಂದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಬದುಕಿದ್ದವರನ್ನು ಹೊರತೆಗೆಯಲು ಪ್ರಯತ್ನಿಸಿದ್ದವು ಎಂದು ತಿಳಿಸಿದರು.
ಲೋಕಸಭೆಯಲ್ಲಿ ಸಿಂಗ್ ಮತ್ತು ಸ್ಪೀಕರ್ ಓಂ ಬಿರ್ಲಾ ಅವರು ಜ.ರಾವತ್ ಮತ್ತು ಇತರರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರೆ,ಅತ್ತ ರಾಜ್ಯಸಭೆಯಲ್ಲಿ ಎರಡು ನಿಮಿಷಗಳ ವೌನವನ್ನು ಆಚರಿಸಲಾಯಿತು.
ಈ ನಡುವೆ,ಜ.ರಾವತ್ ಮತ್ತು ಇತರರ ಗೌರವಾರ್ಥ ರಾಜ್ಯಸಭೆಯ 12 ಸದಸ್ಯರ ಅಮಾನತು ವಿರುದ್ಧ ಪ್ರತಿಭಟನೆ ನಡೆಸದಿರಲು ನಿರ್ಧರಿಸಿರುವುದಾಗಿ ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.