ಡಿ.12ರಂದು ಸಾಂಪ್ರದಾಯಿಕ ಚೇರ್ಕಾಡಿ ಕಂಬಳ
ಬ್ರಹ್ಮಾವರ, ಡಿ.9: ಸಂಪ್ರದಾಯಬದ್ಧ ಐತಿಹಾಸಿಕ ಚೇರ್ಕಾಡಿ ಶ್ರೀಜನ್ನದೇವಿ ಕಂಬಳ ಡಿ.12ರ ರವಿವಾರ ಚೇರ್ಕಾಡಿಯ ಕಂಬಳಗದ್ದೆಯಲ್ಲಿ ಅಪರಾಹ್ನ 12 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಇದರಲ್ಲಿ ಚೇರ್ಕಾಡಿ ಗ್ರಾಮಸ್ಥರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕೋಣಗಳ ಓಟದ ಸ್ಪರ್ಧೆಯೂ ನಡೆಯಲಿದೆ ಎಂದು ಚೇರ್ಕಾಡಿ ಕಂಬಳದ ಆಯೋಜಕರು ತಿಳಿಸಿದ್ದಾರೆ. ಸ್ಪರ್ಧೆಯು ಹಗ್ಗ ಕಿರಿಯ (ನಾಲ್ಕು ಹಲ್ಲಿನ ಒಳಗೆ), ಹಗ್ಗ ಹಿರಿಯ (ನಾಲ್ಕು ಹಲ್ಲಿನ ಮೇಲ್ಪಟ್ಟು) ಹಾಗೂ ಹಲಗೆ ವಿಭಾಗಗಳಲ್ಲಿ ನಡೆಯಲಿವೆ. ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ 7,777ರೂ. ಹಾಗೂ ದ್ವಿತೀಯ ಬಹುಮಾನ ತಲಾ 5,555ರೂ.ಗಳು.
ಇದರೊಂದಿಗೆ ಜಿಲ್ಲಾ ಮಟ್ಟದ ಕೆಸರು ಗದ್ದೆ ಓಟದ ಸ್ಪರ್ಧೆ ಪ್ರಾಥಮಿಕ ವಿಭಾಗ (11-14 ವರ್ಷ), ಪ್ರೌಢ ವಿಭಾಗ (14-18ವರ್ಷ) ಹಾಗೂ ಯುವಜನ ವಿಭಾಗ (18 ವರ್ಷ ಮೇಲ್ಪಟ್ಟು) ಡಿ.12ರ ಅಪರಾಹ್ನ 12ರಿಂದ ಚೇರ್ಕಾಡಿ ಕಂಬಳಗದ್ದೆಯಲ್ಲಿ ನಡೆಯಲಿದೆ. ಅಲ್ಲದೇ ಕೆಸರುಗದ್ದೆ ಹಗ್ಗಜಗ್ಗಾಟ ಸ್ಪರ್ಧೆಯೂ ತಲಾ 7 ಮಂದಿಯ ತಂಡಗಳಿಗೆ ನಡೆಯಲಿವೆ. ವಿಜೇತರಿಗೆ ಸಂಜೆ 5:30ಕ್ಕೆ ಬಹುಮಾನ ವಿತರಣೆ ನಡೆಯಲಿದೆ.
ಕಂಬಳದ ಪ್ರಯುಕ್ತ ಡಿ.13ರಂದು ಶ್ರೀಬ್ರಹ್ಮಬೈದರ್ಕಳ ಹೊಸ ಗರಡಿಯಲ್ಲಿ ಹಾಲಬ್ಬ ಹಾಗೂ ಡಿ.14ರಂದು ಅಗಲು ಸೇವೆಯೂ ನಡೆಯಲಿದೆ ಎಂದು ಆಯೋಜಕರಾದ ಚೇರ್ಕಾಡಿ ದೊಡ್ಡಮನೆಯ ಪ್ರಕಟಣೆ ತಿಳಿಸಿದೆ.







