ಅನಧಿಕೃತ ಕಟ್ಟಡ ನಿರ್ಮಿಸಿದ ಪ್ರಭಾವಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು, ಡಿ.9: ಬೆಂಗಳೂರು ಮಹಾನಗರದಲ್ಲಿನ ಅನಧಿಕೃತ ಕಟ್ಟಡಗಳ ತೆರವುಗೊಳಿಸುವ ವಿಚಾರವಾಗಿ ಪ್ರಭಾವಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿಚಾರಣೆಗೆ ಖುದ್ದು ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಪ್ರಭಾವಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದೆ.
1,31,745 ಅನಧಿಕೃತ ಕಟ್ಟಡಗಳ ಸರ್ವೇ ನಡೆಸಲಾಗಿದೆ. ಈ ಪೈಕಿ 16,286 ಕಟ್ಟಡಗಳಿಗೆ ದಾಖಲೆ ನೀಡುವಂತೆ ನೋಟಿಸ್ ನೀಡಲಾಗಿದೆ. 2020ರಿಂದೀಚೆಗೆ 8,496 ಕಟ್ಟಡಗಳಿಗೆ ನಕ್ಷೆ ನೀಡಲಾಗಿದೆ. ಇವುಗಳಲ್ಲಿ 7,245 ಕಟ್ಟಡಗಳ ಸರ್ವೇ ನಡೆಸಲಾಗಿದೆ. 5,341 ಕಟ್ಟಡಗಳು ನಕ್ಷೆ ಉಲ್ಲಂಘಿಸಿರುವುದು ಪತ್ತೆಯಾಗಿದೆ.
ಈಗಾಗಲೇ ಬೆಂಗಳೂರಿನ 2,656 ಕಟ್ಟಡದ ಮಾಲಕರಿಗೆ ನೋಟಿಸ್ ನೀಡಲಾಗಿದೆ. ವರದಿ ಸಲ್ಲಿಸಲು 3 ತಿಂಗಳ ಕಾಲಾವಕಾಶಕ್ಕೆ ಮನವಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಂಡುಬಂದರೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಗೌರವ ಗುಪ್ತಾ ಅವರು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾಗದದ ಮೇಲಿನ ಕ್ರಮಕ್ಕಿಂತ ವಾಸ್ತವದಲ್ಲಿ ಕ್ರಮ ಕೈಗೊಳ್ಳಿ. ಪ್ರಭಾವಿಗಳ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳನ್ನು ಗುರುತಿಸಿ, ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಈ ಹಿಂದೆಯೇ ನ್ಯಾಯಾಲಯ ಆದೇಶ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿ, ನಗರದ ಕಟ್ಟಡಗಳ ಸಮೀಕ್ಷೆ ನಡೆಸಿತ್ತು.
3 ತಿಂಗಳಲ್ಲಿ ಕ್ರಮ ಕೈಗೊಳ್ಳಿ
ನಗರದಲ್ಲಿನ ಅನಧಿಕೃತ ಕಟ್ಟಡಗಳ ತೆರವುಗೊಳಿಸುವ ವಿಚಾರದಲ್ಲಿ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಹೈಕೋರ್ಟ್ ಬಿಬಿಎಂಪಿಗೆ ಕಾಲಾವಕಾಶ ನೀಡಿದೆ.







